ADVERTISEMENT

ಮರು ಜಾತಿಗಣತಿಗೆ ಶಿಕ್ಷಕರ ಬಳಕೆ ಇಲ್ಲ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:52 IST
Last Updated 21 ಜೂನ್ 2025, 6:52 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: 'ರಾಜ್ಯ ಸರ್ಕಾರ ಮತ್ತೊಮ್ಮೆ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ (ಜಾತಿ ಗಣತಿ) ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಕೆ ಮಾಡುವುದಿಲ್ಲ. ಬದಲಿಗೆ ಗಣತಿಯ ಜವಾಬ್ದಾರಿ ಹೊರಗುತ್ತಿಗೆ ನೀಡಲು ಯೋಚಿಸಲಾಗಿದೆ' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದರೆ ವಾರಗಟ್ಟಲೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠ-ಪ್ರವಚನಕ್ಕೆ ತೊಂದರೆಯಾಗಲಿದೆ ಎಂಬುದನ್ನು ಈಗಾಗಲೇ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೇನೆ. ಹೀಗಾಗಿ ಶಿಕ್ಷಕರ ಬಳಕೆ ಮಾಡುತ್ತಿಲ್ಲ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಜನಾಭಿಪ್ರಾಯದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಗೆ ಮುಂದಾಗಿದೆ. ಬಿಜೆಪಿ ರಾಜಕೀಯ ಲಾಭದ ಅಶಯದೊಂದಿಗೆ ಈ ಸಮೀಕ್ಷೆ ನಡೆಸಲಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಸಂವಿಧಾನದತ್ತ ಅವಕಾಶಗಳು ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ದೊರಕಲಿ ಎಂಬ ಆಶಯದೊಂದಿಗೆ ಮತ್ತೊಮ್ಮೆ ಜಾತಿಗಣತಿಗೆ ಮುಂದಾಗಿದೆ. ಹೀಗಾಗಿ ರಾಜ್ಯದ ಜಾತಿಗಣತಿಯೇ ಹೆಚ್ಚು ನಿಖರ, ಸ್ಪಷ್ಟ ಹಾಗೂ ವಿಶ್ವಾಸಾರ್ಹ' ಎಂದು ಹೇಳಿದರು.

ADVERTISEMENT

ವರದಿ ಬೇಗ ಕೊಡಿ: ಇದೇ ವೇಳೆ ಶಿವಮೊಗ್ಗದಲ್ಲಿ 'ಸಂವಿಧಾನ ಓದು ಶಿಬಿರ'ದ ಉದ್ಘಾಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಸಚಿವ ಮಧು ಬಂಗಾರಪ್ಪ, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದರು.

'ಶಾಲಾ ಶಿಕ್ಷಣ ಇಲಾಖೆಯಲ್ಲಿ ಸದ್ಯ 51 ಸಾವಿರ ಶಿಕ್ಷಕರ ಕೊರತೆ ಇದೆ. ಅದರಲ್ಲಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ ದೊರೆತಿದೆ. ಒಳಮೀಸಲಾತಿ ಹಂಚಿಕೆ ವರ್ಗೀಕರಣ ಕಾರ್ಯ ಪೂರ್ಣಗೊಂಡಲ್ಲಿ ನೇಮಕಾತಿಗೆ ಚಾಲನೆ ದೊರೆಯಲಿದೆ. ಸದ್ಯ ಅತಿಥಿ ಶಿಕ್ಷಕರ ನೇಮಕದ ಮೂಲಕ ಆ ಕೊರತೆ ನೀಗಿಸಿಕೊಳ್ಳಲಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.