ADVERTISEMENT

ತೀರ್ಥಹಳ್ಳಿ | ಮುಜರಾಯಿ ದೇವಸ್ಥಾನಗಳ ಸಮಸ್ಯೆ ಬಗೆಹರಿಸಿ: ಆರಗ ಜ್ಞಾನೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:05 IST
Last Updated 17 ಅಕ್ಟೋಬರ್ 2025, 6:05 IST
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮುಜರಾಯಿ ಅರ್ಚಕರ ಸಭೆಯಲ್ಲಿ ಮಾತನಾಡಿದರು.
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮುಜರಾಯಿ ಅರ್ಚಕರ ಸಭೆಯಲ್ಲಿ ಮಾತನಾಡಿದರು.   

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ 168 ಮುಜರಾಯಿ ದೇವಸ್ಥಾನಗಳು ಕಾರ್ಯ ನಿರ್ವಹಿಸುತ್ತಿದೆ. ದೇವಸ್ಥಾನ ಹಾಗೂ ಅರ್ಚಕರ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಅವಿಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಜರಾಯಿ ದೇವಾಲಯಗಳ ಅರ್ಚಕ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿ, ಮುಜರಾಯಿ ಅಧಿಕಾರಿಗಳು ದೇವಸ್ಥಾನದ ಕೆಲವನ್ನು ದೇವರ ಸೇವೆಗೆ ಸಿಕ್ಕ ಅವಕಾಶ ಎಂದು ಭಾವಿಸಬೇಕು. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದರು.

ಅರ್ಚಕರು ಸೌಲಭ್ಯಗಳನ್ನು ಪಡೆಯಲು ತಾಲ್ಲೂಕು ಕಚೇರಿಗೆ ಅಲೆದಾಡುವ ಸ್ಥಿತಿ ಇದೆ. ಅಸಹಾಯಕರಾದ ಬಹುತೇಕ ಅರ್ಚಕರು ತಸ್ಥಿಕ್‌ ಪಡೆಯಲೂ ಆಗಮಿಸುತ್ತಿಲ್ಲ. ಇನ್ನು ಕೆಲವರು ದೇವರ ಕೈಂಕರ್ಯದಲ್ಲಿಯೇ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ನೇರ ಹಣ ವರ್ಗಾವಣೆಯಿಂದ ಅಂತಹ ಬಹಳಷ್ಟು ಸಮಸ್ಯೆ ಬಗೆಹರಿದಿದೆ ಎಂದರು.

ADVERTISEMENT

‘ದೇವಸ್ಥಾನದ ಜಾಗ ಕಬಳಿಕೆ ಸಂಬಂದ ಹಲವು ದೂರುಗಳು ನೀಡಿದ್ದರೂ ಕ್ರಮ ತೆಗೆದುಕೊಂಡಿಲ್ಲ. ನಾಮಫಲಕ, ಸೇವಾ ಫಲಕ ಅಳವಡಿಕೆಗೆ ಸಂಪನ್ಮೂಲ ನೀಡಬೇಕು. ದೇವಸ್ಥಾನದ ಸುತ್ತಲಿನ ಜಾಗವನ್ನು ದೇವರ ಹೆಸರಿಗೆ ಖಾತೆ ದಾಖಲಿಸಬೇಕು. ಹಳೆ ತಸ್ಥಿಕ್‌ ಬಾಕಿಗೆ ಸೂಕ್ತ ಕ್ರಮ ವಹಿಸಬೇಕು. ನೀರಿನ ಕೊರತೆಗೆ ಬಾವಿ ಅಥವಾ ಪಂಚಾಯಿತಿ ನಲ್ಲಿ ವ್ಯವಸ್ಥೆ ಕಲ್ಪಸಬೇಕು’ ಎಂದು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ‌ ಕೆ.ಎನ್. ಮನವಿ ಮಾಡಿದರು.

‘ಅರ್ಚಕರು ತಾಲ್ಲೂಕು ಕಚೇರಿಗೆ ನೇರವಾಗಿ ಆಗಮಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಇಲ್ಲದಿದ್ದರೆ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಖಾಲಿ ಇರುವ ಅರ್ಚಕ ಹುದ್ದೆಗೆ ಶಿಫಾರಸು ಬಂದಲ್ಲಿ ತಕ್ಷಣವೇ ಭರ್ತಿಗೆ ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾ ಮುಜರಾಯಿ ತಹಶೀಲ್ದಾರ್‌ ಪ್ರದೀಪ್‌ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ಶೈಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.