ADVERTISEMENT

ಜೇನಿಗೆ ಥಾಯ್ಲೆಂಡ್ ವೈರಸ್‌: ಶೇ 75ರಷ್ಟು ಹುಳು ನಾಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 5:00 IST
Last Updated 7 ಏಪ್ರಿಲ್ 2021, 5:00 IST
ವೈರಸ್‌ಗೆ ತುತ್ತಾದ ಜೇನುಗೂಡು
ವೈರಸ್‌ಗೆ ತುತ್ತಾದ ಜೇನುಗೂಡು   

ಶಿವಮೊಗ್ಗ: ಥಾಯ್ಲೆಂಡ್ ಮೂಲದ ವೈರಸ್‌ನಿಂದ ರಾಜ್ಯದ ಜೇನು ಕೃಷಿ ಸಂಕಟಕ್ಕೆ ಸಿಲುಕಿದ್ದು, ಪ್ರತಿ ವರ್ಷ ಶೇ 75ರಷ್ಟು ಜೇನು ಸಂಕುಲ ನಾಶವಾಗುತ್ತಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ರಾಜ್ಯದ ಬಹುತೇಕ ಕೃಷಿಕರು ತಮಿಳುನಾಡು, ಕೇರಳದಿಂದ ಜೇನುಗೂಡು ತರಿಸಿಕೊಳ್ಳುತ್ತಿದ್ದಾರೆ. ಇಂತಹ ಗೂಡುಗಳ ಜತೆಗೆ ಬರುವ ಥಾಯ್‌ಸ್ಯಾಕ್ ಬ್ರೂಡ್‌ ಹೆಸರಿನ ವೈರಸ್‌ ಇಲ್ಲಿನ ಆರೋಗ್ಯವಂತ ಜೇನು ಕುಟುಂಬಗಳಿಗೂ ದಾಳಿ ಮಾಡಿ ನಾಶ ಮಾಡುತ್ತಿವೆ. ತತ್ತಿ ಹಂತದಲ್ಲೇ ಹುಳುಗಳು ನಾಶವಾಗುವ ಪರಿಣಾಮ ಜೇನು ಸಂತತಿ ಕ್ಷೀಣಿಸುತ್ತಿದೆ. ವೈರಸ್‌ ನಿಯಂತ್ರಣಕ್ಕೆ ಇದುವರೆಗೂ ಯಾವ ಔಷಧವೂ ಲಭ್ಯವಿಲ್ಲ. ಈ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರ ಜೇನು ಕೃಷಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಮಲೆನಾಡಿನ ಸಾವಿರಾರು ಜನರು ಸೌಲಭ್ಯ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಜೇನು ಪೆಟ್ಟಿಗೆ ನೀಡುವ ಮೊದಲೇ ವೈರಸ್‌ ಮುಕ್ತವಾಗಿವೆ ಎನ್ನುವುದನ್ನು ಖಾತ್ರಿಪಡಿಸಬೇಕು. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ರೋಗಮುಕ್ತ ಗೂಡುಗಳ ಸಂಶೋಧನೆಗೆ ಒತ್ತು ನೀಡಬೇಕು. ಸ್ಥಳೀಯ ಪ್ರಭೇದಗಳ ಉಳಿವಿಗೆ ಪ್ರಯತ್ನಿಸಬೇಕು. ನಿಷೇಧಿತ ಕೀಟನಾಶಗಳ ಬಳಕೆಗೂ ಕಡಿವಾಣ ಹಾಕಬೇಕು ಎಂದರು.

ADVERTISEMENT

ಈಗಾಗಲೇ ಅರಣ್ಯ ನಾಶದ ಪರಿಣಾಮ ಜೇನು ಸಂತತಿ ಕ್ಷೀಣಿಸಿದೆ. ಮಲೆನಾಡಿನ ಕಾಡು, ಗುಡ್ಡ, ಬೆಟ್ಟಗಳಲ್ಲಿ ನೈಸರ್ಗಿಕ ಜೇನು ಸಿಗುವುದು ಅಪರೂಪವಾಗಿದೆ. ವೈರಸ್‌ ಪರಿಣಾಮ ಜೇನುಕೃಷಿಗೂ ಪೆಟ್ಟು ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೇನು ಕೃಷಿಕ ನಾಗೇಂದ್ರ ಸಾಗರ್, ‘ಜಿಲ್ಲೆಯಲ್ಲಿ 1,500 ಜೇನು ಕೃಷಿಕರು ಇದ್ದಾರೆ. ಸುಮಾರು 7,500 ಪೆಟ್ಟಿಗೆಗಳನ್ನು ಇಡಲಾಗಿದೆ. ಸರಾಸರಿ 11.25 ಕೋಟಿ ಹುಳುಗಳು ಇರುತ್ತವೆ. ವೈರಸ್‌ನಿಂದ 8 ಕೋಟಿಗೂ ಹೆಚ್ಚು ಹುಳುಗಳು ನಾಶವಾಗುತ್ತಿವೆ. ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.