
ಆಳ್ವಾಸ್ ನೃತ್ಯ ವೈಭವದಲ್ಲಿ ಆಂಧ್ರದ ಬಂಜಾರ ನೃತ್ಯದ ಝಲಕು
ಶಿವಮೊಗ್ಗ: ಚುಮು ಚುಮು ಚಳಿಯ ನಡುವೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಸೋಮವಾರದ ಮುಸ್ಸಂಜೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಚಗುಳಿ ಇಟ್ಟಿತು. ಮೂಡಬಿದಿರಿಯ ಆಳ್ವಾಸ್ ಸಂಸ್ಥೆಯ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕಲಾವಿದರು ಮೂರು ತಾಸು ಕಿನ್ನರ ಲೋಕವನ್ನೇ ಅನಾವರಣಗೊಳಿಸಿದ್ದರು.
ಬೃಹತ್ ವೇದಿಕೆಯಲ್ಲಿ ಅನುರಣಿಸಿದ ಸಂಗೀತ, ನೃತ್ಯ, ವಾದ್ಯಗಳ ಝಲಕ್, ಬೆಳಕಿನಾಟ ಹಾಗೂ ಯೋಗ ವೈಭವ ನೆರೆದ ಸಾವಿರಾರು ಜನರನ್ನು ತುದಿಗಾಲಲ್ಲಿ ನಿಲ್ಲಿಸಿತು. ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.
ವೇದಿಕೆಯಲ್ಲಿ ಬೆಳಕಿನ ಚಿತ್ತಾರ ಹೊರಹೊಮ್ಮಿಸಿದ ಹೂ ಪಕಳೆಯ ಹೊಳಪಿನ ನಡುವೆ ಓಂ ನಮಃ ಶಿವಾಯ ಯೋಗ ನೃತ್ಯ ರೂಪಕ, ಸಮುದ್ರ ಮಥನದ ಸಂಗತಿಯನ್ನು ಮರು ಅನಾವರಣಗೊಳಿಸಿದ ಅಷ್ಟಲಕ್ಷ್ಮಿಯರ ಭರತ ನಾಟ್ಯ, ಆಂಧ್ರಪ್ರದೇಶದ ಬಂಜಾರ ನೃತ್ಯ, ಶಿವ–ದಾಕ್ಷಾಯಿಣಿಯ ಮದುವೆಯ ಸಂದರ್ಭದ ನಿರೀಶ್ವರ ಯಾಗದ ನಂತರದ ಶಿವ ತಾಂಡವ, ಮನ್ಮಥನ ಪರಿಣಯ, ಶಿವ ಪಾರ್ವತಿಯರ ಮದುವೆ, ಅರ್ಧನಾರೀಶ್ವರ ಪ್ರಸಂಗದ ಯಕ್ಷ ಪ್ರಯೋಗ, ಬಡಗುತಿಟ್ಟು ಯಕ್ಷಗಾನ ಶ್ರೀರಾಮ ಪಟ್ಟಾಭಿಷೇಕ ಕಳೆಗಟ್ಟಿದವು.
ಗುಜರಾತಿನ ಗಾರ್ಭಾ ಮತ್ತು ದಾಂಡಿಯಾ, ಮಣಿಪುರದ ಸ್ಟಿಕ್ ಡ್ಯಾನ್ಸ್, ಕಥಕ್ ನೃತ್ಯ ವರ್ಷಧಾರೆ, ಸೃಜನಾತ್ಮಕ ನೃತ್ಯ, ಮಲ್ಲಕಂಬ–ರೋಪ್ ಕಸರತ್ತು, ಪುರುಲಿಯಾ ನೃತ್ಯ, ಬೊಂಬೆ ವಿನೋದಾವಳಿ ಸೇರಿದಂತೆ ವೈವಿಧ್ಯಮಯ ನೃತ್ಯ, ಸಂಗೀತ ಪ್ರಕಾರಗಳು ಸಂಜೆಯ ಭಿತ್ತಿಗೆ ರಂಗು ತುಂಬಿದವು.
ಮಕ್ಕಳು, ಹಿರಿಯರು, ಮಹಿಳೆಯರನ್ಜು ಒಳಗೊಂಡು ಕಿಕ್ಕಿರಿದು ತುಂಬಿದ್ದ ಮೈದಾನ ಹೊಸದೊಂದು ಸಾಂಸ್ಕೃತಿಕ ವೈಭೋಗಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದ ನಂತರ ರಾತ್ರಿ ಬಯಲಲ್ಲಿ ಸೇರಿದ್ದ ಎಲ್ಲರಿಗೂ ಪುಷ್ಕಳ ಭೋಜನದ ಆತಿಥ್ಯವೂ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ನಡೆದ ಪುಟ್ಟ ವೇದಿಕೆ ಸಮಾರಂಭದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷೆ ಜಿ.ಪಲ್ಲವಿ, ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ.ದಿನೇಶ್. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲ್, ಸಂತೆಕಡೂರು ವಿಜಯಕುಮಾರ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎನ್.ಜ್ಯೋತಿಪ್ರಕಾಶ್, ಬಿಜೆಪಿ ಮುಖಂಡ ಬಳ್ಳೇಕೆರೆ ಸಂತೋಷ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಇದ್ದರು.
ಮಲೆನಾಡ ಹೆಬ್ಬಾಗಿಲಲ್ಲಿ ಇಂತಹ ಕಾರ್ಯಕ್ರಮ ಆಯೋಜನೆಗೆ ಸಂಘಟಕರ ಶ್ರಮ ಅಭಿನಂದನೀಯ. ಆಳ್ವಾಸ್ ನೃತ್ಯ ವೈಭವದಂತಹ ಕಾರ್ಯಕ್ರಮ ಆಗಾಗ ಇಲ್ಲಿ ನಡೆಯುತ್ತಿರಬೇಕು
–ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಶಿವಮೊಗ್ಗದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಮುನ್ನಡೆಸುವ ಹಾದಿಯಲ್ಲಿ ಇದು ಪುಟ್ಟ ಹೆಜ್ಜೆ. ಮುಂದಿನ ದಿನಗಳಲ್ಲಿ ಈ ಹೆಜ್ಜೆ ಅಗಾಧವಾಗಿ ಇಲ್ಲಿನ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಿಡಲು ಇದು ಹಾದಿ ತೋರಲಿದೆ.
–ಸಿ.ಎಸ್.ಷಡಾಕ್ಷರಿ ಆಳ್ವಾಸ್ ಸಾಂಸ್ಕೃತಿಕ ವೈಭವ ಸಮಿತಿಯ ಗೌರವಾಧ್ಯಕ್ಷ
ಆಳ್ವಾಸ್ ಸಾಂಸ್ಕೃತಿಕ ಹಬ್ಬ ಶಿವಮೊಗ್ಗದಲ್ಲಿ ಆಯೋಜಿಸಿ ಇಡೀ ದೇಶದ ಸಂಸ್ಕೃತಿ ಇಲ್ಲಿ ಉಣಬಡಿಸುತ್ತಿರುವುದು ವಿಶೇಷ. ಎಲ್ಲ ಸಂಘಟಕರ ಪರಿಶ್ರಮ ಸ್ತ್ಯುತ್ತಾರ್ಹ
– ಆರ್.ಪ್ರಸನ್ನ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಸಿ; ಮೋಹನ್ ಆಳ್ವ
ಸಮಾರಂಭದ ಆರಂಭದಲ್ಲಿ ಆಶಯ ನುಡಿ ಹೇಳಿದ ಮೂಡಿಗೆರೆ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಎಂ.ಮೋಹನ್ ಆಳ್ವ ‘ಸೌಂದರ್ಯ ಪ್ರಜ್ಞೆ ಇರುವವನು ಮಾತ್ರ ಈ ದೇಶವನ್ನು ಇಲ್ಲಿಯ ಆಚಾರ ವಿಚಾರ ಸಂಸ್ಕೃತಿಯ ಪ್ರೀತಿಸುತ್ತಾನೆ. ನೆಲದ ಮಣ್ಣನ್ನು ಗೌರವಿಸುತ್ತಾನೆ. ಹೀಗಾಗಿ ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಬೆಳೆಸಿ’ ಎಂದು ಸಲಹೆ ನೀಡಿದರು. ಸಿ.ಎಸ್. ಷಡಾಕ್ಷರಿ ಎಸ್.ಪಿ.ದಿನೇಶ್ ಹಾಗೂ ಮೋಹನ್ ಕುಮಾರ್ ಅವರ ತಂಡದ ಶ್ರಮದಿಂದ ಆರನೇ ಬಾರಿಗೆ ಶಿವಮೊಗ್ಗದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಶ್ಲಾಘಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ‘ಕಾರ್ಯಕ್ರಮದ ಆಯೋಜನೆಯ ಧ್ಯೇಯೋದ್ದೇಶಗಳನ್ನು ಬಿಚ್ಚಿಟ್ಟರು. ಕಾರ್ಯಕ್ರಮದ ಯಶಸ್ಸಿಗೆ ಪಕ್ಷಾತೀತವಾಗಿ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದರು. ವಂದನಾರ್ಪಣೆ ನೆರವೇರಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಕಾರ್ಯಕ್ರಮದ ಆಯೋಜನೆಗೆ ₹ 5 ಲಕ್ಷ ಕೊಟ್ಟು ಎಸ್ ಬಿಐ ನೆರವಾಗಿದೆ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.