ಹೊಳೆಹೊನ್ನೂರು: ತನ್ನ ಮಾಲೀಕ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಶ್ವಾನವೊಂದು, ಅವರು ಮೃತಪಟ್ಟಿದ್ದು ತಿಳಿಯದೇ ಅವರಿಗಾಗಿ ಆಸ್ಪತ್ರೆಯಲ್ಲೇ 15 ದಿನಗಳಿಂದ ಠಿಕಾಣಿ ಹೂಡಿದ್ದ ಪ್ರಸಂಗ ಇಲ್ಲಿ ನಡೆದಿದೆ.
ಸಮೀಪದ ಕನ್ನೆಕೊಪ್ಪದ ಫಾಲಾಕ್ಷಪ್ಪ, ಎದೆನೋವಿನಿಂದಾಗಿ ಇಲ್ಲಿನ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಅವರು ಈಚೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ತನ್ನ ಮಾಲೀಕ ಸಮುದಾಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರಬಹುದು ಎಂದು ಭಾವಿಸಿದ್ದ ಶ್ವಾನ, ಪ್ರತಿ ನಿತ್ಯ ಆಸ್ಪತ್ರೆಯ ಒಳಗೆ ಹೋಗಿ ಎಲ್ಲಾ ಕೋಣೆಗಳಲ್ಲೂ ಹುಡುಕಾಟ ನಡೆಸುತ್ತಿತ್ತು.
ಸಿಬ್ಬಂದಿ ಹಾಗೂ ರೋಗಿಯ ಸಂಬಂಧಿ ಅದನ್ನು ಹೊರಗೆ ಓಡಿಸಲು ಮುಂದಾದಾಗ ಬೊಗಳುತ್ತಿತ್ತು. ಈ ಶ್ವಾನವು ಫಾಲಾಕ್ಷಪ್ಪ ಅವರೊಂದಿಗೆ ಆಸ್ಪತ್ರೆಗೆ ಬಂದಿದ್ದನ್ನು ಅವರಿಗೆ ಚಿಕಿತ್ಸೆ ನೀಡಿದ್ದ ಸಿಬ್ಬಂದಿಯೊಬ್ಬರು ನೋಡಿದ್ದರು. ಶ್ವಾನದ ಉಪಟಳ ಹೆಚ್ಚಾಗಿದ್ದರಿಂದ ಇದನ್ನು ಹಿಡಿದುಕೊಂಡು ಹೋಗುವಂತೆ ವೈದ್ಯ ದೇವಾನಂದ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಮಾಡಿದ್ದರು. ಹೀಗಾಗಿ ಸಿಬ್ಬಂದಿ ಶನಿವಾರ ಇದನ್ನು ಹಿಡಿದು, ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದಲ್ಲಿ ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.