ADVERTISEMENT

ಹಂದಿ ಅಣ್ಣಿ ಕೊಲೆ ಆರೋಪಿ ಸಾವು; ಇನ್ನೊಬ್ಬನ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 15:23 IST
Last Updated 15 ಮಾರ್ಚ್ 2023, 15:23 IST
ನ್ಯಾಮತಿ ತಾಲ್ಲೂಕಿನ ಗೋವಿನಕೋವಿ– ಚೀಲೂರು ಗ್ರಾಮಗಳ ಮಧ್ಯೆ ಕೊಲೆಯಾಗಿರುವ ಸ್ಥಳದಲ್ಲಿ ಸ್ಕಾರ್ಪಿಯೊ ಬಿಟ್ಟು ಹೋಗಿರುವ ಆರೋಪಿಗಳು
ನ್ಯಾಮತಿ ತಾಲ್ಲೂಕಿನ ಗೋವಿನಕೋವಿ– ಚೀಲೂರು ಗ್ರಾಮಗಳ ಮಧ್ಯೆ ಕೊಲೆಯಾಗಿರುವ ಸ್ಥಳದಲ್ಲಿ ಸ್ಕಾರ್ಪಿಯೊ ಬಿಟ್ಟು ಹೋಗಿರುವ ಆರೋಪಿಗಳು   

ಶಿವಮೊಗ್ಗ/ದಾವಣಗೆರೆ: ಶಿವಮೊಗ್ಗದಲ್ಲಿ ಕಳೆದ ವರ್ಷ ನಡೆದಿದ್ದ ರೌಡಿ ಶೀಟರ್ ಹಂದಿ ಅಣ್ಣಿ (ಅಣ್ಣೇಗೌಡ) ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಆಂಜನೇಯ ಹಾಗೂ ಮಧು ಮೇಲೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ಗುಂಪೊಂದು ದಾಳಿ ನಡೆಸಿ ಹಲ್ಲೆ ಮಾಡಿದೆ. ಘಟನೆಯಲ್ಲಿ ಆಂಜನೇಯ (30) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಕೊಲೆ ಪ್ರಕರಣದ ವಿಚಾರಣೆಗಾಗಿ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ಬೈಕ್‌ನಲ್ಲಿ ಸ್ವಂತ ಊರಾದ ಭಾನುವಳ್ಳಿಗೆ ವಾಪಸಾಗುತ್ತಿದ್ದ ಈ ಇಬ್ಬರನ್ನು ಸ್ಕಾರ್ಪಿಯೊ ವಾಹನದಲ್ಲಿ ಹಿಂಬಾಲಿಸಿದ ಗುಂಪು, ಗೋವಿನಕೋವಿ– ಚೀಲೂರು ಗ್ರಾಮಗಳ ನಡುವೆ ಬೈಕ್‌ಗೆ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದೆ. ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವಾಹನ ಬಿಟ್ಟು ಪರಾರಿಯಾಗಿದೆ.

ಘಟನೆಯಲ್ಲಿ ಇನ್ನೊಬ್ಬ ಆರೋಪಿ ಮಧು (28) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂದಿ ಅಣ್ಣಿ ಕೊಲೆ ಆರೋಪದ ಬಂಧಿತರಾಗಿದ್ದ ಈ ಇಬ್ಬರು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ADVERTISEMENT

ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಸಹವರ್ತಿ ಆಗಿದ್ದ ಹಂದಿ ಅಣ್ಣಿಯನ್ನು 2022ರ ಜುಲೈ 14ರಂದು ಆತನ ವಿರೋಧಿಗಳಾದ ಕಾಡಾ ಕಾರ್ತಿಕ್ ತಂಡದವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶಿವಮೊಗ್ಗದ ವಿನೋಬ ನಗರದ ಪೊಲೀಸ್ ಚೌಕಿ ಬಳಿ ಘಟನೆ ನಡೆದಿತ್ತು.

ಕೊಲೆ ಆರೋಪಿಗಳಾದ ಕಾರ್ತಿಕ್, ನಿತಿನ್, ಮಧು, ಬಾಲು, ಆಂಜನೇಯ, ಮದನ್, ಚಂದನ್ ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದರು. ಆರೋಪಿಗಳು ಹಂದಿ ಅಣ್ಣಿ ಸಹಚರ ಅನಿಲ್ ಅಲಿಯಾಸ್ ಅಂಬುವಿನ ಕೊಲೆಗೂ ಯೋಜನೆ ರೂಪಿಸಿದ್ದರು ಎಂಬ ವಿಚಾರ ವಿಚಾರಣೆ ವೇಳೆ ಬಯಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.