ADVERTISEMENT

ವ್ಯಕ್ತಿ ಪ್ರತಿಷ್ಠೆಯ ಕ್ಷೇತ್ರದಲ್ಲೀಗ ಪಕ್ಷ ಸಂಘಟನೆ ಮಾತು

ಭದ್ರಾವತಿ ಕ್ಷೇತ್ರದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ

ಕೆ.ಎನ್.ಶ್ರೀಹರ್ಷ
Published 10 ಏಪ್ರಿಲ್ 2022, 5:47 IST
Last Updated 10 ಏಪ್ರಿಲ್ 2022, 5:47 IST

ಭದ್ರಾವತಿ: ಮೂರು ದಶಕಗಳಿಂದ ವ್ಯಕ್ತಿಪ್ರತಿಷ್ಠೆಯ ಕಣವಾಗಿ ಮೂರು ಬಾರಿ ಪಕ್ಷೇತರರ ಪಾಲಿಗೆ ಒಲಿದಿದ್ದ ಕ್ಷೇತ್ರದಲ್ಲೀಗ ಪಕ್ಷ ಸಂಘಟನೆಯ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ.

ಕ್ಷೇತ್ರದಲ್ಲಿ ಅಪ್ಪಾಜಿ ಮತ್ತು ಸಂಗಮೇಶ್ವರ ನಡುವಿನ ನೇರ ಹಣಾಹಣಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದರ ಪರಿಣಾಮ ಸೈದ್ಧಾಂತಿಕ ಹೋರಾಟ ಮಂಕಾಗಿ ವ್ಯಕ್ತಿಗಳ ನಡುವಿನ ಸ್ಪರ್ಧೆಗೆ ಸೀಮಿತವಾಗಿದ್ದ ಕ್ಷೇತ್ರ ಈ ಬಾರಿ ಬದಲಾವಣೆಯ ಪರ್ವಕ್ಕೆ ಹೆಜ್ಜೆ ಹಾಕುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಪ್ಪಾಜಿ ನಿಧನ ನಂತರ ನಡೆದ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಯಲ್ಲಿ ವ್ಯಕ್ತಿ ಪ್ರತಿಷ್ಠೆಯ ಸದ್ದು ಮೊಳಗಿದರೂ ಬಿಜೆಪಿ ಸೇರಿ ಇನ್ನಿತರೆ ಪಕ್ಷಗಳ ಸ್ಪರ್ಧೆ ಒಂದಿಷ್ಟು ಬದಲಾವಣೆ ಮಾಡಿದ್ದು ಮಾತ್ರ ಸತ್ಯ.

ADVERTISEMENT

‘ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹಿಂದೆ ಇದ್ದ ವ್ಯಕ್ತಿ ಪ್ರತಿಷ್ಠೆಯ ಮಾತುಗಳು ಇಂದು ಗೌಣವಾಗಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ಮಾತು ಕೇಳಿಬರುತ್ತಿದೆ. ಈ ಮೂಲಕ ಸೈದ್ಧಾಂತಿಕ ಹೋರಾಟ ಕಾಣುವ ಸಾಧ್ಯತೆ ಇದೆ’ ಎನ್ನುತ್ತಾರೆ ಎಎಪಿ ಮುಖಂಡ ರವಿಕುಮಾರ್.

‘5 ವರ್ಷಗಳಿಂದ ಎಎಪಿ ಪಕ್ಷ ಸಂಘಟನೆ ನಡೆಸಿದೆ ಅನೇಕ ಹೊಸಬರು ನಿರ್ದಿಷ್ಟ ಗುರಿ ಹೊಂದಿರುವ ನಮ್ಮನ್ನು ಗುರುತಿಸಿ ಬೆಂಬಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ಬದಲಾವಣೆ ಮಾತು ಹೆಚ್ಚಿದೆ’ ಎಂದು ಅವರು ಹೇಳಿದರು.

ಸೈದ್ಧಾಂತಿಕ ಶಕ್ತಿ ಹೆಚ್ಚಲಿದೆ:‘ವ್ಯಕ್ತಿ ಪ್ರತಿಷ್ಠೆಯ ಹಣಾಹಣಿ ಅಂತ್ಯವಾಗಲಿದೆ. ಸೈದ್ಧಾಂತಿಕ ಚಿಂತನೆ ಬೆಳೆಸಿಕೊಳ್ಳುವ ಮನೋಭಾವ ಹೆಚ್ಚಿದೆ. ನಾವು ಹೇಗೆ ನಿಂತರೂ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ಮಾತು ಮುಂದಿನ ಚುನಾವಣೆಯಲ್ಲಿ ದೂರವಾಗಲಿದೆ. ಬದಲಾವಣೆಯ ಲಾಭ ಪಡೆಯಲು ಪಕ್ಷಗಳು ಪ್ರಯತ್ನ ನಡೆಸಿವೆ’ ಎನ್ನುತ್ತಾರೆ ಬಿಎಸ್ಪಿ ತಾಲ್ಲೂಕು ಸಂಯೋಜಕ ರಾಜೇಂದ್ರ.

‘ಈ ಬಾರಿ ಚುನಾವಣೆಯಲ್ಲಿ ಪುನಃ ವ್ಯಕ್ತಿಯ ಮೇಲೆ ಜನರು ಮತ ನೀಡುವ ಸಾಧ್ಯತೆ ಇದೆ. ಮುಂದಿನ ದಿನದಲ್ಲಿ ಇದು ಬದಲಾಗಬಹುದು’ ಎನ್ನುತ್ತಾರೆ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದಕುಮಾರ್.

ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದ ಮತದಾರ ವ್ಯಕ್ತಿಯ ಮೇಲೆ ಮತ ಚಲಾಯಿಸುವ ಮನಃಸ್ಥಿತಿ ಹೊಂದಿದ್ದಾನೆ. ಜೆಡಿಎಸ್ ಪಕ್ಷದ ಎಲ್ಲರೂ ಬಿಜೆಪಿ ಸೇರಿದರೆ ಬರುವ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರಲಿದೆ ಎಂದು ವಿಶ್ಲೇಷಿಸುತ್ತಾರೆ ಅವರು.

‘ಅಪ್ಪಾಜಿ ನಮ್ಮ ನಡುವೆ ಇಲ್ಲದೆ ಇರಬಹುದು. ಆದರೆ ಅವರ ಹೆಸರಿನ ಮೇಲೆ ಮತ ಸೆಳೆಯುವ ಶಕ್ತಿ ಅವರ ಪರವಾದ ಅಭ್ಯರ್ಥಿಗೆ ಇದೆ. ಇದರ ಪ್ರಮಾಣ ಶೇ 30ರಷ್ಟಿದೆ. ಈಗಾಗಲೇ ಪಕ್ಷ ಅವರ ಪತ್ನಿ ಶಾರದಾ ಅಪ್ಪಾಜಿ ಹೆಸರು ಘೋಷಿಸಿದೆ. ಇದರ ಲಾಭ ನಮಗೆ ಸಿಗಲಿದೆ’ ಎಂದು ಜೆಡಿಎಸ್ ಮುಖಂಡ ಎಚ್.ಆರ್. ಲೋಕೇಶ್ವರರಾವ್ ಹೇಳಿದರು.

‘ಮತದಾರರು ಈ ಬಾರಿ ಸೈದ್ಧಾಂತಿಕ ಹೋರಾಟದ ಲಾಭವನ್ನು ಬಿಜೆಪಿಗೆ ನೀಡಲಿದ್ದಾರೆ. ಅಪ್ಪಾಜಿ ಇಲ್ಲದ ಈ ಚುನಾವಣೆಯಲ್ಲಿ ನೇರ ಹಣಾಹಣಿ ಕಾಂಗ್ರೆಸ್, ಬಿಜೆಪಿ ನಡುವೆ ನಡೆಯಲಿದೆ. ಅಪ್ಪಾಜಿ ಬೆಂಬಲಿಸುತ್ತಿದ್ದ ಅನೇಕರು ಈಗ ನಮ್ಮ ಪಕ್ಷದೊಂದಿಗೆ ಇದ್ದಾರೆ’ ಎಂದು ಪ್ರತಿಕ್ರಿಯಿಸಿದರು ಬಿಜೆಪಿ ಯುವ ಮೋರ್ಚಾ ಮುಖಂಡ ನಕುಲ್.

ಬದಲಾದ ಸನ್ನಿವೇಶದಲ್ಲಿನ ಹೋರಾಟ ಭಿನ್ನ ರೀತಿಯಲ್ಲಿ ಇರಲಿದೆ ಎಂಬುದನ್ನು ಒಪ್ಪುವ ಇಲ್ಲಿನ ಮುಖಂಡರು ಕೆಲ ಪಕ್ಷಗಳಿಗೆ ಸೇರ್ಪಡೆಯತ್ತ ಮುಖ ಮಾಡಿರುವುದು ವ್ಯಕ್ತಿ ಪ್ರತಿಷ್ಠೆಯ ಹೆಜ್ಜೆಗುರುತು ಅಳಿಸುವ ಪರಿಸ್ಥಿತಿ ಸೃಷ್ಟಿಸಿದೆ.

ಏ.21ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಬರುತ್ತಿದ್ದು, ಆಗ ರಾಜ್ಯಕ್ಕೆ ಮತ್ತು ಪ್ರತಿ ಮತ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಣೆ ಮಾಡಲಿದ್ದಾರೆ. ಇದರ ಮೇಲೆ ಕ್ಷೇತ್ರದಲ್ಲಿ ನಮ್ಮ ಸಂಘಟನೆ ಚುರುಕಾಗಲಿದೆ.

ರವಿಕುಮಾರ್, ಎಎಪಿ ಜಿಲ್ಲಾ ಮುಖಂಡ

ಬಿಎಸ್ಪಿ ಸೈದ್ಧಾಂತಿಕ ಅರಿವನ್ನು ಕಾರ್ಯಕರ್ತರ ನಡುವೆ ಹೆಚ್ಚು ಮಾಡುವ ಕೆಲಸ ಆರಂಭಿಸಿದೆ. ಈಗಾಗಲೇ ಶಿಬಿರ ನಡೆಸಿ ಅರಿವು ಮೂಡಿಸಿದ್ದು, ಇದನ್ನು ಪ್ರತಿ ಬೂತ್ ಮಟ್ಟಕ್ಕೆ ತಲುಪಿಸುವ ಯೋಜನೆ ರೂಪಿಸಿದ್ದೇವೆ.

- ರಾಜೇಂದ್ರ, ಬಿಎಸ್ಪಿ ತಾಲ್ಲೂಕು ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.