ADVERTISEMENT

ತೀರ್ಥಹಳ್ಳಿ: ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿರದ ಶೌಚಾಲಯಗಳು

ಪಟ್ಟಣ ಪಂಚಾಯಿತಿ ಆಡಳಿತದ ತೀವ್ರ ನಿರ್ಲಕ್ಷ್ಯ ಆರೋಪ

ನಿರಂಜನ ವಿ.
Published 7 ಡಿಸೆಂಬರ್ 2024, 5:14 IST
Last Updated 7 ಡಿಸೆಂಬರ್ 2024, 5:14 IST
ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಮಹಿಳಾ ಶೌಚಾಲಯದ ಬಾಗಿಲು ಮುರಿದಿರುವುದು
ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಮಹಿಳಾ ಶೌಚಾಲಯದ ಬಾಗಿಲು ಮುರಿದಿರುವುದು   

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ದುರ್ಗತಿಗೆ ತಲುಪಿರುವ ಕಾರಣ ಸಾರ್ವಜನಿಕರ ಬಳಕೆಯಿಂದ ದೂರ ಉಳಿದಿವೆ.

ತುಂಗಾ ನದಿಗೆ ಹೊಂದಿಕೊಂಡಂತೆ ರಥಬೀದಿಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಬಾಗಿಲು ಮುರಿದಿದೆ. ಸ್ನಾನಗೃಹವು ಮದ್ಯಪ್ರಿಯರ ಅಡಗು ತಾಣವಾಗಿ ಬದಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದರೂ ನಲ್ಲಿ ಸಂಪರ್ಕ ನೀಡಿಲ್ಲ. ನೀರೇ ಇಲ್ಲದೆ ಶೌಚಾಲಯದ ಬಳಕೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಟಿಎಪಿಸಿಎಂಎಸ್‌ ರಸ್ತೆಯ ಶೌಚಾಲಯಕ್ಕೆ ಶೌಚಗುಂಡಿಯೇ ಇಲ್ಲ. ಮಲ, ಮೂತ್ರ ನೇರವಾಗಿ ರಾಜಕಾಲುವೆ ಸೇರುತ್ತಿದೆ. ರಾಜಕಾಲುವೆ ನೀರು ಶುದ್ಧೀಕರಣಗೊಳ್ಳದೆ ತುಂಗಾ ನದಿ ಸೇರುತ್ತಿದೆ. ಸಂತೆ ಮಾರ್ಕೆಟ್ ಶೌಚಾಲಯ‌ಕ್ಕೂ ನೀರಿನ ಸೌಲಭ್ಯ, ಬಾಗಿಲುಗಳು ಇಲ್ಲ. ಶೌಚಾಲಕ್ಕೆ ತೆರಳುವ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ಜನರು ತಿರುಗಾಡಲು ಸಾಧ್ಯವಾಗದ ಸ್ಥಿತಿ ಇದೆ.

ADVERTISEMENT

ಜೆಸಿ ಆಸ್ಪತ್ರೆಗೆ ಹೊಂದಿಕೊಂಡಂತೆ ಕೊಪ್ಪ ಸರ್ಕಲ್‌ನಲ್ಲಿ ಶೌಚಾಲಯ ನಿರ್ಮಿಸಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ವೀಕ್ಷಕರು ಬಳಸುತ್ತಾರೆ. ಸುತ್ತಮುತ್ತಲ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರಿಗೂ ಅನುಕೂಲವಾಗಿತ್ತು. ಆದರೆ, ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶೃಂಗೇರಿ ಮಾರ್ಗವಾಗಿ ರಸ್ತೆ ನಿರ್ಮಿಸಿದ್ದು ಬೃಹತ್ ತಡೆಗೋಡೆ ನಿರ್ಮಿಸಿರುವ ಕಾರಣ ಶೌಚಾಲಯ ಇದೆ ಎಂಬುದೇ ಯಾರಿಗೂ ತಿಳಿಯದಂತಾಗಿದೆ.

ಮುಖ್ಯ ಬಸ್‌ ನಿಲ್ದಾಣ, ತಾಲ್ಲೂಕು ಕಚೇರಿ, ಆಗುಂಬೆ ವೃತ್ತದಲ್ಲಿ ಪಾವತಿಸಿ ಉಪಯೋಗಿಸುವ ಶೌಚಾಲಯಗಳಿವೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಸೆಪ್ಟಿಕ್‌ ಟ್ಯಾಂಕ್‌ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಎರಡು–ಮೂರು ದಿನಗಳಿಗೊಮ್ಮೆ ಶೌಚ ಗುಂಡಿ ಭರ್ತಿಯಾಗುತ್ತಿದೆ. ಸಕ್ಕಿಂಗ್‌ ಯಂತ್ರದ ಮೂಲಕ ಗುಂಡಿಯಲ್ಲಿ ಸಂಗ್ರಹವಾದ ಮಲವನ್ನು ಸಂಗ್ರಹಿಸುವ ಸಂಕಷ್ಟಕ್ಕೆ ಪಟ್ಟಣ ಪಂಚಾಯಿತಿ ಸಿಲುಕಿದೆ. ಒಮ್ಮೆ ಸಕ್ಕಿಂಗ್‌ ಯಂತ್ರ ರಸ್ತೆಗೆ ಇಳಿದರೆ ಸುತ್ತಮುತ್ತಲ 500 ಮೀಟರ್‌ ವ್ಯಾಪ್ತಿಯಲ್ಲಿ ದುರ್ವಾಸನೆ ಹರಡುತ್ತಿದೆ. ಸಾರ್ವಜನಿಕರು ಪಟ್ಟಣದ ವ್ಯವಸ್ಥೆಯನ್ನು ನಿತ್ಯ ಶಪಿಸುವಂತಾಗಿದೆ.

ಅಂಗನವಾಡಿ ಮಕ್ಕಳಿಗೆ ಸಿಗದ ಶೌಚಾಲಯ: ರಥಬೀದಿಯಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂಭಾಗದಲ್ಲಿ ಅಂಗನವಾಡಿ ಕೇಂದ್ರವಿದೆ. ಅಲ್ಲಿನ ಮಕ್ಕಳು ಮತ್ತು ಸಿಬ್ಬಂದಿ ಶೌಚಾಲಯ ಬಳಸುತ್ತಿದ್ದರು. ಶೌಚಗೃಹದ ಬಾಗಿಲು ಮುರಿದಿರುವುದರಿಂದ ಬಳಕೆಗೆ ಸಿಗದಾಗಿದೆ.

ಅಲ್ಲದೇ ಇಲ್ಲಿ ಪ್ರತಿವರ್ಷ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ, ತೆಪೋತ್ಸವ ಸಂದರ್ಭದಲ್ಲಿ ಸಾವಿರಾರು ವ್ಯಾಪಾರಿಗಳು, ಲಕ್ಷಾಂತರ ಭಕ್ತರಿಗೂ ಈ ಶೌಚಾಲಯ ಆಧಾರವಾಗಿದೆ. ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೌಚಾಲಯಗಳ ಸ್ಥಿತಿಗತಿ ಸುಧಾರಣೆಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತೀರ್ಥಹಳ್ಳಿ ರಥಬೀದಿಯಲ್ಲಿರುವ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ
ಶೌಚಾಲಯದ ಸ್ನಾನಗೃಹದಲ್ಲಿ ಬಿದ್ದಿರುವ ಮದ್ಯದ ಪೌಚುಗಳು
ನಲ್ಲಿ ಇಲ್ಲದ ಸಿಂಕು.
ಬಾಗಿಲು ಇಲ್ಲದ ಸ್ನಾನದಗೃಹ
ಚಿಲಕ ಇಲ್ಲದ ಬಾಗಿಲು
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ನಲ್ಲಿ ನೀರು ಬಾಗಿಲು ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು.
ವಿಶ್ವನಾಥ ಗಾಣಿಗ ಸ್ಥಳೀಯ ನಿವಾಸಿ
ಅವೈಜ್ಞಾನಿಕ ಶೌಚಗುಂಡಿ ನಿರ್ಮಾಣದ ಕಾರಣ ಸಮಸ್ಯೆ ತಲೆದೋರಿದೆ. ಸಮಸ್ಯೆ ನಿವಾರಣೆಗೆ ₹ 2 ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಎರಡ್ಮೂರು ದಿನದಲ್ಲಿ ಕಾಮಗಾರಿ ಆರಂಭವಾಗಲಿದೆ.
ಟಿ.ರಹಮತ್‌ ಉಲ್ಲಾ ಅಸಾದಿ ಅಧ್ಯಕ್ಷ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.