ADVERTISEMENT

ತೀರ್ಥಹಳ್ಳಿ: ಸಾವಿರಕ್ಕೂ ಹೆಚ್ಚು ಹಣ್ಣಿನ ತಳಿ ಬೆಳೆದ ರೈತ

ನಿರಂಜನ ವಿ.
Published 30 ಏಪ್ರಿಲ್ 2025, 6:53 IST
Last Updated 30 ಏಪ್ರಿಲ್ 2025, 6:53 IST
ತೀರ್ಥಹಳ್ಳಿ ತಾಲ್ಲೂಕಿನ ಹೇರಂಭಾಪುರದಲ್ಲಿ ರೈತ ಎಚ್.ಎಸ್.ಶಿವಪ್ರಸಾದ್ ಬೆಳೆದಿರುವ ಕೆಂಪು ನೀರು ಪೇರಲೆ
ತೀರ್ಥಹಳ್ಳಿ ತಾಲ್ಲೂಕಿನ ಹೇರಂಭಾಪುರದಲ್ಲಿ ರೈತ ಎಚ್.ಎಸ್.ಶಿವಪ್ರಸಾದ್ ಬೆಳೆದಿರುವ ಕೆಂಪು ನೀರು ಪೇರಲೆ   

ತೀರ್ಥಹಳ್ಳಿ: ಇಲ್ಲಿನ ತೋಪಿಗೆ ಭೇಟಿ ನೀಡಿದರೆ ದೇಶ–ವಿದೇಶಗಳ ತರಹೇವಾರಿ ತಳಿಗಳ ಹಣ್ಣುಗಳನ್ನು ಸವಿಯಬಹುದಾದ ವಿನೂತನ ಕಲ್ಪನೆಯನ್ನು ರೈತರೊಬ್ಬರು ಸೃಷ್ಟಿಸಿದ್ದಾರೆ. ಯಾರೇ ಭೇಟಿ ನೀಡಿದರೂ ಅವರಿಗಾಗಿ ಒಂದೆರಡು ವಿಧದ ಹಣ್ಣುಗಳು ಸರ್ವ ಕಾಲದಲ್ಲಿಯೂ ಸವಿಯಲು ಸಿಕ್ಕೇ ಸಿಗುತ್ತವೆ.

ಹೇರಂಭಾಪುರ ಗ್ರಾಮದ ಜಿಗಳೇಬೈಲು ಎಚ್.ಎಸ್.‌ಶಿವಪ್ರಸಾದ್ ಅಂದಾಜು 5 ಎಕರೆ ಪ್ರದೇಶದಲ್ಲಿ ವಿವಿಧ ಪ್ರಭೇದದ ದೇಶ–ವಿದೇಶಗಳ ಹಣ್ಣುಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ 1,100ಕ್ಕೂ ಹೆಚ್ಚು ಪ್ರಭೇದದ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಈ ಪೈಕಿ 372‌ ತಳಿಗಳ ಹಣ್ಣುಗಳ ಸಿಹಿಯನ್ನು ಆನಂದಿಸಿದ್ದಾರೆ.

22 ವರ್ಷಗಳ ಹಿಂದೆ ಎಸ್‌ಎಸ್‌ಎಸ್‌ಸಿ ಓದುತ್ತಿದ್ದ ಶಿವಪ್ರಸಾದ್‌ ಅಡಿಕೆಗೆ ₹22,000 ಬೆಲೆ ಬಂದಾಗ ಖುಷಿಪಟ್ಟಿದ್ದರು. ಅಡಿಕೆಯ ಬೆಲೆಯ ಮುಂದೆ ವಿದ್ಯಾಭ್ಯಾಸ ಬೇಕೇ ಎಂಬ ಪ್ರಶ್ನೆ ಹಾಕಿಕೊಂಡು ಶಾಲೆಯನ್ನು ಮೊಟಕುಗೊಳಿಸಿದರು. ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುವ ಅಚಲ ನಂಬಿಕೆಯಿಂದ ಭೂಮಿಯ ಜೊತೆ ನಿಕಟ ಸಂಬಂಧ ಬೆಳೆಸಿಕೊಂಡರು. 

ADVERTISEMENT

ತನಗಿರುವ 16.5 ಎಕರೆ ಕೃಷಿ ಜಮೀನಿನಲ್ಲಿ ವಿವಿಧ ಪ್ರಯೋಗಳನ್ನು ನಡೆಸಿದ್ದಾರೆ. ತಂದೆ ಶಂಕರನಾರಾಯಣ ಭಟ್ ಹಾಕಿಕೊಟ್ಟ ದಾರಿಯಲ್ಲಿಯೇ ಹೊಸ ಹೊಸ ಯತ್ನಕ್ಕೆ ಮುಂದಾಗಿದ್ದಾರೆ. ಹಣ್ಣಿನ ಗಿಡ, ಮರಗಳನ್ನು ಬೆಳೆಸುತ್ತಿರುವ ಜೊತೆಗೆ ತನ್ನಂತೆ ಹವ್ಯಾಸ ಇಟ್ಟುಕೊಂಡವರಿಗೆ ಹಣ್ಣಿನ ಗಿಡಗಳ ನರ್ಸರಿ ಆರಂಭಿಸಿ ಗಿಡಗಳನ್ನು ಹಂಚುತ್ತಿದ್ದಾರೆ. ರಾಜ್ಯ, ಹೊರರಾಜ್ಯಗಳ ಬೆಳೆಗಾರರಿಗೆ ಸಂಪನ್ಮೂಲ ವ್ಯಕ್ತಿಯಾಗಿ ವಾರದಲ್ಲಿ 5 ದಿನ ಅವರು ಪ್ರವಾಸದಲ್ಲಿರುತ್ತಾರೆ.

‘ಬಹುತೇಕರು ‘ಪಕ್ಷಿಗಳು ತಿನ್ನದ ಒಳ್ಳೆಯ ಹಣ್ಣಿನ ಗಿಡ ಕೊಡಿ’, ‘ಮಲೆನಾಡಿಗರು ಮಂಗ ಮುಟ್ಟದ ಹಣ್ಣು ಬೇಕು’ ಎಂದು ಕೇಳುತ್ತಾರೆ. ಆದರೆ ನನ್ನ ಜಮೀನಿನಲ್ಲಿ 450ಕ್ಕೂ ಹೆಚ್ಚು ಮಂಗಗಳಿವೆ. ಅವುಗಳು ತಿಂದು ಉಳಿದ ಹಣ್ಣುಗಳು ಸಾಕಷ್ಟಿವೆ. ಅವುಗಳಿಗಾಗಿಯೇ ಹಣ್ಣಿನ ಗಿಡಗಳನ್ನು ಹಾಕಿದ್ದೇನೆ. ಕೃಷಿಯಲ್ಲಿ ಪ್ರಾಣಿ, ಪಕ್ಷಿಗಳಿಗೂ ಪಾಲು ಕೊಡುವ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಏಕಜಾತಿಯ ಬೆಳೆಯಿಂದ ಕಷ್ಟವಾಗುತ್ತದೆ’ ಎನ್ನುತ್ತಾರೆ ಶಿವಪ್ರಸಾದ್.

ಬ್ರೆಜಿಲ್‌, ಮಲೇಷ್ಯಾ, ಥಾಯ್ಲೆಂಡ್, ಇಂಡೋನೇಷ್ಯಾ, ತೈವಾನ್‌, ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ಸೇರಿದಂತೆ ಭಾರತದ ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳ ಹಣ್ಣಿನ ಗಿಡಗಳನ್ನೂ ಬೆಳೆದು ಯಶಸ್ವಿಯಾಗಿದ್ದಾರೆ. ಜೊತೆಗೆ ಯಾವ ಪ್ರದೇಶದಲ್ಲಿ ಯಾವ ಗಿಡಗಳು ಬೆಳೆಯುತ್ತದೆ ಎಂಬ ಸ್ಪಷ್ಟವಾದ ಜ್ಞಾನವನ್ನು ಹೊಂದಿರುವುದು ಇವರ ವಿಶೇಷ.

ಇಂಡೋನೇಷ್ಯಾದ ಕಾಡುಗಳಲ್ಲಿ ಕಾಂಡದಲ್ಲೇ ಹಣ್ಣು ಬಿಡುವ ₹25,000 ಬೆಲೆಬಾಳುವ ಸಿಜಿಜಿಯಂ ಜೀಹೋಯಿ ಹೆಸರಿನ ಹಣ್ಣಿನ ಸಸಿಯೊಂದನ್ನು ತಂದು ಅವರು ಪೋಷಿಸುತ್ತಿದ್ದಾರೆ. ವಿದೇಶದಲ್ಲಿ ಯಾವ ಹಣ್ಣುಗಳಿಗೆ ಹೆಚ್ಚಿನ ಮಾರುಕಟ್ಟೆ ಇದೆ ಎಂಬುದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯ ಸ್ಪಷ್ಟ ಚಿತ್ರಣ ಸಿಗುತ್ತದೆ. ವಾಣಿಜ್ಯ ಬೆಳೆಗಳಾಗಿಯೂ ಹಣ್ಣಿನ ಗಿಡಗಳನ್ನು ಬೆಳೆಸಬಹುದು ಎಂದು ಅವರು ಹೇಳುತ್ತಾರೆ.

ಅಮೆಜಾನ್‌ ಕಾಡುಗಳಲ್ಲಿ ಕಂಡುಬರುವ ಹಬನೆರೊ ಮೆಣಸು 
ಗುವಾ ಹಣ್ಣು ತೋರಿಸುತ್ತಿರುವ ರೈತ ಶಿವಪ್ರಸಾದ್
ದುಬಾರಿ ಬೆಲೆಯ ಸಿಜಿಜಿಯಂ ಜೀಹೋಯಿ ಹಣ್ಣಿನ ಗಿಡ
ಇಂಡೋನೇಷ್ಯಾ ಮೂಲದ ಕಬ್ಬು
ಗುವಾ ಹಣ್ಣಿಗೆ ಮಂಗಗಳು ಮುತ್ತದಂತೆ ಮರಕ್ಕೆ ಬಲೆಯನ್ನು ಹಾಕಿರುವುದು
ವಿವಿಧ ತಳಿಯ ಡ್ರಾಗನ್‌ ಫ್ರೂಟ್ಸ್‌ ಬೆಳೆದಿರುವುದು
ನೀರು ಪೇರಲೆ ಹಣ್ಣುಗಳು
ಕೋಕೋ ಬೆಳೆದಿರುವುದು

Quote - ಆಕಾಶದಲ್ಲಿ ಹಾರುವ ಸಣ್ಣ ಪಕ್ಷಿಗಳಿಗೂ ತಾನು ಏನು ತಿನ್ನಬೇಕು ಎಂಬ ಬಗ್ಗೆ ಸ್ಪಷ್ಟತೆ ಇರುತ್ತದೆ. ಆದರೆ ಮನುಷ್ಯರ ಮಾತ್ರ ಮೈದಾಹಿಟ್ಟಿನಿಂದ ಮಾಡಿದ ಪಿಜ್ಜಾ ಮೊದಲಾದವೇ ಶ್ರೇಷ್ಠ ಎಂದು ತಿಳಿದುಕೊಂಡಿದ್ದಾನೆ  ಶಿವಪ್ರಸಾದ್ ಕೃಷಿಕ

Cut-off box - ವಿಭಿನ್ನ ಹಣ್ಣುಗಳ ಬೆಳೆಗಾರ:  ಶಿವಪ್ರಸಾದ್‌ ಅವರ ತೋಟದಲ್ಲಿ ಹಣ್ಣಿನ ನೂರಾರು ತಳಿಗಳ ವೈವಿಧ್ಯವೇ ಮೇಳೈಸಿದೆ. ಮಾವಿನ 110 ತಳಿಗಳನ್ನು ಅವರು ಬೆಳೆದಿದ್ದಾರೆ. ಹಾಗೆಯೇ ಲಾಂಗನ್ 40 ರಾಂಬುಟನ್‌ 17 ಅಬಿಯು 14 ಪೇರಲೆ 40 ಹಲಸು 200 ಸಪೋಟ 7 ನೀರು ಪೇರಲೆ 20 ಮಟೋವಾ 8 ಮ್ಯಾಂಗೋಸ್ಟಿನ್‌ ಅನಾಸ್‌ನ 35 ತಳಿಗಳ ಹಣ್ಣಿನ ಮರಗಳನ್ನು ಬೆಳೆದಿದ್ದಾರೆ. ತೋಟಗಾರಿಕಾ ಬೆಳೆಗಳಾಗಿ ರಬ್ಬರ್‌ ತೆಂಗು ಜಾಯಿಕಾಯಿ ಅಡಿಕೆ ಕೋಕೋ ಗಿಡಗಳನ್ನು ಹೊಂದಿದ್ದಾರೆ. 2 ಎಕರೆ ಭತ್ತದ ಗದ್ದೆಯನ್ನು ಸಾಗುವಳಿ ಮಾಡುತ್ತಿದ್ದಾರೆ. ಕೋಕೋ ಮಲೆನಾಡಿನ ಎರಡನೇ ಅಡಿಕೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.