ADVERTISEMENT

ಆಗುಂಬೆ: ಎಲ್ಲೆಂದರಲ್ಲಿ ಕಸದ ರಾಶಿ– ಕಾರಣರಾದವರಲ್ಲಿ ಪ್ರವಾಸಿಗರದ್ದೇ ಸಿಂಹಪಾಲು!

ಪ್ರವಾಸಿಗರದ್ದೇ ಸಿಂಹಪಾಲು; ಅರಣ್ಯ ಪ್ರದೇಶವನ್ನು ವ್ಯಾಪಿಸುತ್ತಿದೆ ಪ್ಲಾಸ್ಟಿಕ್‌

ನಿರಂಜನ ವಿ.
Published 9 ಏಪ್ರಿಲ್ 2025, 7:55 IST
Last Updated 9 ಏಪ್ರಿಲ್ 2025, 7:55 IST
ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಸ ಚೆಲ್ಲಿರುವುದು
ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಸ ಚೆಲ್ಲಿರುವುದು   

ತೀರ್ಥಹಳ್ಳಿ: ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಗುಂಬೆಯ ಸುತ್ತಮುತ್ತ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿವೆ. ಗ್ರಾಮಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ತ್ಯಾಜ್ಯ ಸಲೀಸಾಗಿ ಅರಣ್ಯ ಪ್ರದೇಶ ಸೇರುತ್ತಿದೆ.

ಸ್ವಚ್ಛ ಭಾರತ್ ಮಿಷನ್‌ ಅಡಿ ಗ್ರಾಮಗಳ ಸ್ವಚ್ಛತೆ ಹಾಗೂ ಕಸ ಸಂಗ್ರಹ ಉದ್ದೇಶದಿಂದ ನೀಡಲಾಗಿದ್ದ ವಾಹನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಾಹನ ಓಡಿಸುವವರು ಮತ್ತು ಕಸ ಸಂಗ್ರಹಕಾರರ ಕೊರತೆಯಿಂದ ಸ್ವಚ್ಛತಾ ಕಾರ್ಯ ನನೆಗುದಿಗೆ ಬಿದ್ದಿದೆ. ಆಗುಂಬೆ ಮಳೆಗೆ ಕಸ ಸಂಗ್ರಹ ವಾಹನ ಬೇಗನೇ ತುಕ್ಕು ಹಿಡಿಯುತ್ತಿದೆ. ಚಾಲಕರು ಇಲ್ಲದ ಕಾರಣ, ಅದರ ಎಂಜಿನ್‌ ಹಾಳಾಗಿದೆ ಎಂಬ ದೂರುಗಳು ಕೇಳಿ ಬಂದಿದೆ.

ಆಗುಂಬೆ ಬಸ್‌ ನಿಲ್ದಾಣ, ಘಾಟಿ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನು ವಿವಿಧ ಸ್ವಯಂಸೇವಾ ಸಂಘಗಳು, ಸರ್ಕಾರೇತರ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಆದರೂ ಪ್ರವಾಸಿಗರು, ವಾಹನ ಸವಾರರು ತಿಂಡಿ ಪೊಟ್ಟಣ, ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಗ್ರಾಮಾಡಳಿತ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ADVERTISEMENT

ಬರ್ಕಣಾ, ಜೋಗಿಗುಂಡಿ, ಒನಕೆ ಅಬ್ಬಿ ಫಾಲ್ಸ್‌, ಸೂರ್ಯಾಸ್ತಮಾನ ಗೋಪುರ ಮುಂತಾದ ಕಡೆಗಳಲ್ಲಿ ಜನರು ಬಳಸಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳು ತೊಟ್ಟಿಗಳಲ್ಲೇ ಉಳಿಯುವಂತಾಗಿದೆ. ಪ್ರವಾಸಿಗರನ್ನು ನಂಬಿದ 10ಕ್ಕೂ ಹೆಚ್ಚು ಹೋಟೆಲ್‌ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೋಟೆಲ್‌, ಅಂಗಡಿಗಳಲ್ಲಿ ಸಂಗ್ರಹವಾದ ಕಸವನ್ನೂ ಸರಿಯಾದ ಸಮಯಕ್ಕೆ ಸಂಗ್ರಹಿಸುವ ಕೆಲಸ ಆಗುತ್ತಿಲ್ಲ. ಕಸ ವಿಲೇವಾರಿಗೆ ಅವರು ಪ್ರಯಾಸ ಪಡಬೇಕಾದ ಸನ್ನಿವೇಶ ಆಗುಂಬೆಯಲ್ಲಿ ಸೃಷ್ಟಿಯಾಗಿದೆ. 

ಅರಣ್ಯ ಸೇರುವ ಪ್ಲಾಸ್ಟಿಕ್‌

ಸೋಮೇಶ್ವರ ಅಭಯಾರಣ್ಯದ ಬಫರ್‌ ಝೋನ್ ವ್ಯಾಪ್ತಿಯಲ್ಲಿರುವ ಆಗುಂಬೆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗುತ್ತಿದೆ. ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ವಸ್ತುಗಳನ್ನು ಮಂಗ, ನರಿ ಮುಂತಾದ ಪ್ರಾಣಿಗಳು ಸಲೀಸಾಗಿ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗುತ್ತಿವೆ. ಜೊತೆಗೆ ಜೋರಾಗಿ ಬೀಸುವ ಗಾಳಿ, ಮಳೆಯಿಂದ ಪ್ಲಾಸ್ಟಿಕ್‌ ಅಭಯಾರಣ್ಯದ ಒಡಲು ಸೇರುತ್ತಿದೆ. ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿಯಾಗಿ ಪ್ರಾಣಿಗಳಿಗೆ ಹಣ್ಣು, ತರಕಾರಿ ನೀಡುವ ವಾಹನ ಸವಾರರು, ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಅಲ್ಲಿಯೇ ಎಸೆಯುತ್ತಾರೆ. ಹೀಗಾಗಿ ಘಾಟಿ ವ್ಯಾಪ್ತಿಯಲ್ಲಿಯೂ ವಿಪರೀತ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ.

ಸ್ಥಳೀಯವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಡಂಚಿನ ಜಾಗ ಹಾಗೂ ಬಯಲು ಪ್ರದೇಶಗಳಲ್ಲಿ ಎಸೆಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ. ಇಂತಹ ಹಲವು ಕಾರಣಗಳಿಂದ ಪಂಚಾಯಿತಿಗೆ ಕಸ ಸಂಗ್ರಹಣೆ ತಲೆನೋವಾಗಿ ಪರಿಣಮಿಸಿದೆ.

ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಸ ಚೆಲ್ಲಿರುವುದು
ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಸ ಚೆಲ್ಲಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಸ್‌ ನಿಲ್ದಾಣದ ಸಮೀಪ ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು

ಕೈಚೆಲ್ಲಿದ ಸಂಜೀವಿನಿ ಒಕ್ಕೂಟ

ಸ್ವಚ್ಛ ಭಾರತ್‌ ಮಿಷನ್‌ ಅಡಿ ಪ್ರತಿ ಗ್ರಾಮ ಪಂಚಾಯಿತಿಗೆ ಕಸ ಸಂಗ್ರಹಣೆ ವಾಹನ ಒದಗಿಸಲಾಗಿದೆ. ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ಮಹಿಳೆಯರೇ ಈ ವಾಹನ ಚಾಲನೆ ಮಾಡಬೇಕೆಂಬ ನಿಯಮವಿದೆ. ಅದಕ್ಕಾಗಿ ಆಗುಂಬೆಯ ಸೂರ್ಯೋದಯ ಸಂಜೀವಿನಿ ಒಕ್ಕೂಟಕ್ಕೆ ವಾಹನ ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ವಾಹನ ಚಾಲನಾ ತರಬೇತಿಗೆ ಒಕ್ಕೂಟದಿಂದ ಯಾವ ಮಹಿಳೆಯೂ ತೆರಳಿಲ್ಲ. ಹೀಗಾಗಿ ವಾಹನವನ್ನು ನೀರುಗಂಟಿ ಓಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಯುವ ಮುಖಂಡ ಆಸಿಫ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.