ADVERTISEMENT

ತೀರ್ಥಹಳ್ಳಿ: ರೋಗಬಾಧೆಗೆ ಸಿಲುಕಿದ ಭಾಗಾಯ್ತು

ಭಾರಿ ಮಳೆಯಿಂದಾಗಿ ಎಲೆಚುಕ್ಕಿ, ಕೊಳೆರೋಗ ಬಾಧೆ; ಔಷಧ ಸಿಂಪಡಿಸಿ ಕಂಗಾಲಾದ ರೈತರು

ನಿರಂಜನ ವಿ.
Published 14 ಆಗಸ್ಟ್ 2025, 8:01 IST
Last Updated 14 ಆಗಸ್ಟ್ 2025, 8:01 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಡಿಕೆ ಎಲೆಚುಕ್ಕಿ ರೋಗ ತಗುಲಿದ ಅಡಿಕೆ ಗಿಡ 
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಡಿಕೆ ಎಲೆಚುಕ್ಕಿ ರೋಗ ತಗುಲಿದ ಅಡಿಕೆ ಗಿಡ    

ನಿರಂಜನ ವಿ

ತೀರ್ಥಹಳ್ಳಿ: ಮೂರು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಅಡಿಕೆ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಮಳೆ, ಮೋಡ, ಬಿಸಿಲಿನ ವಾತಾವರಣದ ಪರಿಣಾಮ ಎಲೆಚುಕ್ಕಿ ರೋಗ ಉಲ್ಬಣಿಸುತ್ತಿದ್ದು, ಅಡಿಕೆ ಮರಗಳು ರೋಗಕ್ಕೆ ತುತ್ತಾಗುತ್ತಿವೆ.

ಬಹುತೇಕ ಗ್ರಾಮಗಳಲ್ಲಿ ಈಗಾಗಲೇ ಅಡಿಕೆಗೆ ವ್ಯಾಪಕವಾಗಿ ಕೊಳೆರೋಗ ಕಾಣಿಸಿಕೊಂಡಿದೆ. 2 ಬಾರಿ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣವಾಗಿಲ್ಲ. ಶೀತ ವಾತಾವರಣ ಸೃಷ್ಟಿ ಆಗಿದ್ದು, ಅಡಿಕೆ ಕೊನೆಯಲ್ಲಿ ಫಂಗಸ್‌ (ಕೊಳೆ) ಉತ್ಪತ್ತಿಗೊಂಡಿದೆ. ಅಡಿಕೆ ಮೆಳೆ, ಹಸಿರುಕಾಯಿ ಕೊಳೆತು ಉದುರಿ ಬೀಳುತ್ತಿವೆ.

ADVERTISEMENT

ಅತಿ ಹೆಚ್ಚು ನೀರು ಬಳಕೆ, ಪ್ರಾಕೃತಿಕ ಅಸಮತೋಲನ, ಅಕಾಲಿಕ ಮಳೆ, ಬಿಸಿಲು, ಚಳಿಯ ವಾತಾವರಣ ರೋಗ ಉಲ್ಬಣಕ್ಕೆ ಕಾರಣ ಎಂಬ ಬಿರುಸಿನ ಚರ್ಚೆ ಆರಂಭಗೊಂಡಿದೆ. ಅಲ್ಲದೆ ರೈತರು ಬೇಸಾಯ ಕ್ರಮ ಬದಲಾಯಿಸಿಕೊಂಡಿದ್ದು, ನಿರೀಕ್ಷಿತ ಪ್ರತಿಫಲ ದೊರೆಯುತ್ತಿಲ್ಲ.

2020ರಲ್ಲಿ ಆಗುಂಬೆ ಹೋಬಳಿಯಲ್ಲಿ ಎಲೆಚುಕ್ಕಿ ರೋಗದ ಲಕ್ಷಣ ಕಾಣಿಸಿಕೊಂಡಿತ್ತು. ಐದು ವರ್ಷ ಕಳೆದರೂ ಇಂದಿಗೂ ರೋಗ ತಡೆಗಟ್ಟುವ ಉಪಕ್ರಮಗಳು ಅಥವಾ ಸಂಶೋಧನೆಗಳು ನಡೆಯಲಿಲ್ಲ ಎಂಬ ಚಿಂತೆ ಹೆಚ್ಚಳವಾಗಿದೆ. ಹಳೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಹೊರತುಪಡಿಸಿ ಹೊಸ ಬಗೆಯ ಸಂಶೋಧನೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯದಲ್ಲಿ ಅಂದಾಜು 45,000 ಹೆಕ್ಟೇರ್‌ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಲು ಕೇಂದ್ರ ಸರ್ಕಾರ 2022ರ ನವೆಂಬರ್‌ನಲ್ಲಿ ತಜ್ಞರ ಸಮಿತಿ ರೂಪಿಸಿತ್ತು. ಕಾಸರಗೋಡು ಕೇಂದ್ರೀಯ ತೋಟ ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್‌ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಮಂಗಳೂರು ತೋಟಗಾರಿಕೆ ಇಲಾಖೆ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರು ಸಮಿತಿಯ ಸದಸ್ಯರಾಗಿದ್ದಾರೆ.

ತಜ್ಞರ ಸಮಿತಿ ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಆಗುಂಬೆ, ಶಿರಸಿಯ ಆಯ್ದ ರೋಗ ಬಾಧಿತ ಅಡಿಕೆ ತೋಟಗಳಿಗೆ ಭೇಟಿ ನೀಡಿತ್ತು. ಈವರೆಗೂ ರೋಗಕ್ಕೆ ಕಾರಣವಾದ ಅಂಶಗಳ ಕುರಿತು ಅಧಿಕೃತ ಮಾಹಿತಿ ಲಭಿಸಿಲ್ಲ. ರೋಗ ನಿಯಂತ್ರಣ ಕ್ರಮಗಳ ಕುರಿತು ಸೂಕ್ತ ಸಲಹೆ, ಪಾಲಿಸಬೇಕಾದ ವಿಧಾನ ದೊರೆತಿಲ್ಲ ಎಂಬ ದೂರು ರೈತರಿಂದ ಕೇಳಿಬಂದಿದೆ.

5 ವರ್ಷಗಳಿಂದ ಸತತವಾಗಿ ಬಿಡದೆ ಕಾಡುತ್ತಿರುವ ಎಲೆಚುಕ್ಕಿ ರೋಗ ಅಡಿಕೆ ಮಿಳ್ಳೆಗಳಿಗೂ (ಚಿಗುರು ಕಾಯಿ) ಹಬ್ಬುತ್ತಿದೆ. ಸ್ವತಃ ರೈತರೇ ಪ್ರಯೋಗ ಮಾಡಿದ ಹಳೆಯ ಸರಕಲು ತೋಟ, ಸಸಿ ತೋಟಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ನಿಯಂತ್ರಣಕ್ಕಾಗಿ ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದು, ಪ್ರಯೋಜನ ಲಭಿಸುತ್ತಿಲ್ಲ. ಎಲೆಚುಕ್ಕಿ, ಹಿಂಗಾರ ಒಣಗು, ಹಸಿರುಕಾಯಿ ಉದುರುವ ರೋಗ ಬಾಧೆಗೆ ಸಿಕ್ಕಿರುವ ಅಡಿಕೆ ಕೊನೆಯಲ್ಲಿ ಕೊಳೆರೋಗದಿಂದ ಸಂಪೂರ್ಣ ನಾಶದ ಹಾದಿ ಹಿಡಿದಿರುವುದು ರೈತರನ್ನು ಕಂಗೆಡಿಸಿದೆ.

ಔಷಧ ವೆಚ್ಚ ದುಬಾರಿ: 

ಅಡಿಕೆ ದೋಟಿ ಲಭ್ಯವಿರುವ ಕಾರಣ ಔಷಧ ಸಿಂಪಡಣೆ ಸುಲಭವಾಗಿದೆ. ಮರ ಹತ್ತುವವರ ಸಹಾಯ ಇಲ್ಲದೆಯೂ ಅಡಿಕೆಗೆ ಔಷಧ ಸಿಂಪಡಿಸುವ ವ್ಯವಸ್ಥಿತ ತಯಾರಿಯನ್ನು ರೈತರು ಮಾಡಿಕೊಂಡಿದ್ದಾರೆ. ಆದರೆ ತಾಲ್ಲೂಕಿನಲ್ಲಿ 25,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಶೇಕಡಾ 35ರಷ್ಟು ಅಡಿಕೆ ಬೆಳೆ ಕೊಳೆರೋಗ, ಎಲೆಚುಕ್ಕಿಗೆ ಸಿಲುಕಿದೆ. ಬೋರ್ಡೋ ಮಿಶ್ರಣ ಔಷಧಕ್ಕೆ ಮೈಲುತುತ್ತ, ರಾಳ (ಅಂಟು), ಸುಣ್ಣ ಬಳಸಲಾಗುತ್ತದೆ. ಎಕರೆ ಅಡಿಕೆ ತೋಟದ ಔಷಧ ಸಿಂಪಡಣೆಗೆ ಕುಶಲ ಕಾರ್ಮಿಕ ವೇತನ, ಔಷಧ ಸಾಮಗ್ರಿ ಬಾಬ್ತು ಸೇರಿ ಅಂದಾಜು ₹ 15,000 ವೆಚ್ಚ ತಗಲುತ್ತದೆ. ಈ ವರ್ಷದ ಮಳೆ ಆರ್ಭಟದ ಪರಿಣಾಮ ಕೊಳೆರೋಗ ನಿಯಂತ್ರಣಕ್ಕೆ ನಾಲ್ಕೈದು ಬಾರಿ ಔಷಧ ಸಿಂಪರಣೆ ಅನಿವಾರ್ಯವಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಡಿಕೆ ಕಾಯಿಗಳು ಉದುರಿರುವುದು 
ಅಡಿಕೆ ತೋಟದಲ್ಲಿ ವಿಪರೀತ ಮಳೆಯ ಪರಿಣಾಮ ಶೀತ ವಾತಾವರಣವಿದೆ. ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಿದರೂ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು
ಕೆ.ಎ. ವಸುಪಾಲ ತಾಲ್ಲೂಕು ಕೃಷಿಕ ಸಮಾಜದ ಸದಸ್ಯ

‘ಎಲೆಚುಕ್ಕಿ: ಆಗಸ್ಟ್‌ ನಂತರ ಅಂದಾಜು’

ಮೇ ತಿಂಗಳಿನಿಂದ ಮಳೆ ಆರಂಭಗೊಂಡಿದ್ದು ಕೊಳೆರೋಗ ಹೆಚ್ಚಳವಾಗಿದೆ. 5000 ಹೆಕ್ಟೇರ್‌ ಪ್ರದೇಶದ ಕೊಳೆರೋಗ ವರದಿಯನ್ನು ಮೇಲಧಿಕಾರಿಗೆ ಕಳುಹಿಸಲಾಗಿದೆ. ಎಲೆಚುಕ್ಕಿ ತೀವ್ರತೆ ಆಗಸ್ಟ್‌ ನಂತರ ಅಂದಾಜಿಸಲಾಗುತ್ತದೆ. ರೈತರಿಗೆ ರೋಗ ನಿಯಂತ್ರಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.