
ತೀರ್ಥಹಳ್ಳಿ: ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತರಕರ ಘಟನೆ ನಡೆಯದಂತೆ ಎಲ್ಲಾ ಇಲಾಖೆಯ ಮುಖ್ಯಸ್ಥರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ರಂಜಿತ್ ಎಸ್. ಸೂಚನೆ ನೀಡಿದರು.
ಡಿಸೆಂಬರ್ 19 ರಿಂದ 21ರವರೆಗೆ ನಡೆಯುವ ಎಳ್ಳಮಾವಾಸ್ಯೆ ಜಾತ್ರೆಯ ಪೂರ್ವ ಸಿದ್ಧತೆ ಅಂಗವಾಗಿ ಮಂಗಳವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.
ತೀರ್ಥಸ್ನಾನ, ರಥೋತ್ಸವ, ತೆಪ್ಪೋತ್ಸವದ ಅಂಗವಾಗಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು. ಆಹಾರ ಇಲಾಖೆ ಅನ್ನದಾಸೋಹ ನಡೆಯುವ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳನ್ನು ನಿಯಂತ್ರಿಸಬೇಕು. ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು. ಕಿಡಿಗೇಡಿತನ ನಡೆಯದಂತೆ ಎಚ್ಚರ ವಹಿಸಬೇಕು ಎಂದರು.
‘250 ಪೊಲೀಸ್, 50 ಗೃಹರಕ್ಷಕ ದಳ, ಕೆಎಸ್‌ಆರ್‌ಪಿ, ಡಿಆರ್ ಪೊಲೀಸ್, 2 ಅಗ್ನಿಶಾಮಕ ವಾಹನ ಸೌಲಭ್ಯಕ್ಕಾಗಿ ಕೇಳಿಕೊಳ್ಳಲಾಗಿದೆ. ಅಲ್ಲದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಘಟಕ, 40ಕ್ಕೂ ಹೆಚ್ಚು ಸಿ.ಸಿ.ಟಿ.ವಿ. ಕ್ಯಾಮೆರಾ, 2 ಡ್ರೋಣ್, 2 ಪೊಲೀಸ್ ಚೌಕಿ, ವಿಶೇಷವಾಗಿ ಕಳ್ಳತನ ತಡೆಯಲು ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ರೈಮ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ’ ಎಂದು ಇನ್‌ಸ್ಪಕ್ಟರ್ ಇಮ್ರಾನ್ ಬೇಗ್ ತಿಳಿಸಿದರು.
‘ಸಾರ್ವಜನಿಕ ಕಾರ್ಯಕ್ರಮದಲ್ಲಿ ಅನಾಹುತ ಸಂಭವಿಸದಂತೆ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ ಸಮಿತಿ ಮುನ್ನೆಚ್ಚರಿಕೆ ವಹಿಸಿ 2 ಅಗ್ನಿಶಾಮಕ ವಾಹನವನ್ನು ಕೇಳಿಕೊಂಡಿತ್ತು. ಇಲಾಖೆ ₹ 15,000 ಹಣ ಪಾವತಿಸುವಂತೆ ತಿಳಿಸಿದೆ. ಸರ್ಕಾರದ ಸಂಸ್ಥೆಯೇ ಸಾರ್ವಜನಿಕ ಸೇವೆಗೆ ಹಣ ಕೇಳಿದರೆ ನಾವೇನು ಮಾಡಬೇಕು’ ಎಂದು ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಸಮಸ್ಯೆ ಮುಂದಿಟ್ಟರು.
ಸಭೆಯಲ್ಲಿ ಸಹ ಸಂಚಾಲಕ ಟಿ.ಎಲ್.ಸುಂದರೇಶ್ ಇದ್ದರು.
ಬಹುಮಹಡಿ ವಾಹನ ನಿಲುಗಡೆ…
ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಹೆಚ್ಚಳವಾಗುತ್ತಿದೆ. ಸಾರ್ವಜನಿಕ ಕಚೇರಿ ಅಥವಾ ಯಾವುದಾದರು ಜಾಗವನ್ನು ಗುರುತಿಸುವ ಅವಕಾಶ ಇದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬಹುದು. ಉತ್ತಮವಾದ ಬಹುಮಹಡಿ ವಾಹನ ನಿಲುಗಡೆಯ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ಅದರ ಲಾಭ ಸಿಗಲಿದೆ. ಜೊತೆಗೆ ಪಟ್ಟಣದ ವಾಹನ ದಟ್ಟಣೆ ನಿಯಂತ್ರಿಸಬಹುದು ಎಂದು ತಹಶೀಲ್ದಾರ್ ಸಭೆಯ ಮುಂದಿಟ್ಟರು. ಕೊಪ್ಪ ಸರ್ಕಲ್ ಹಳೆಯ ಬಿಇಓ ಕಚೇರಿ. ಹಳೆಯ ಶಾಸಕರ ಕಚೇರಿ ಅರಣ್ಯ ಇಲಾಖೆ ಪ್ರದೇಶ ಈಗಿರುವ ಬಸ್ಟಾಂಡ್ ಅಭಿವೃದ್ಧಿಯ ಬಗ್ಗೆ ಸಲಹೆಗಳು ಬಂದವು. ಅವುಗಳನ್ನು ಪರಿಗಣಿಸಲಾಗುವುದು ಎಂದು ತಹಶೀಲ್ದಾರ್ ರಂಜಿತ್ ಎಸ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.