ತೀರ್ಥಹಳ್ಳಿ: ಅತಿಯಾಗಿ ಮಳೆ ಸುರಿಯುವ ಕಾರಣದಿಂದ ಮಲೆನಾಡು ಭಾಗದಲ್ಲಿ ಸ್ವಾಭಾವಿಕವಾಗಿ ಕಟ್ಟಡ ಸೋರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚರವಹಿಸಿ ಸೋರದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತೀರ್ಥಹಳ್ಳಿ ಪಟ್ಟಣದ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ, ಪೊಲೀಸ್ ವಸತಿ ಸಮುಚ್ಚಯಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇರ್ಸನಿಯಿಂದ ಗೋಡೆ ಒದ್ದೆಯಾಗುತ್ತದೆ. ಮಲೆನಾಡು ಭಾಗಕ್ಕೆ ವಿಶೇಷವಾದ ವಿನ್ಯಾಸ ಅಗತ್ಯ ಇದೆ ಎಂದರು.
ರಾಜ್ಯದಲ್ಲಿ ಒಂದು ಲಕ್ಷ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರೂ ಕೇವಲ 46,000 ವಸತಿ ಸಮುಚ್ಛಯಗಳಿವೆ ಎಂಬುದು ನೋವಿನ ಸಂಗತಿ. 24 ಗಂಟೆಗಳ ಕಾಲ ಒತ್ತಡದ ಜೀವನ ನಡೆಸುವ ಪೊಲೀಸರಿಗೆ ಸರಿಯಾದ ವಸತಿ ಸೌಲಭ್ಯ ಇಲ್ಲ ಎಂದರೆ ನಾವು ಬಹಳ ಹಿಂದೆ ಉಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
‘ಜೀವ ರಕ್ಷಿಸುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಹೊಳೆ, ನದಿ, ಹಳ್ಳ, ಕೆರೆಯಲ್ಲಿ ಮೃತಪಟ್ಟ ವ್ಯಕ್ತಿಯ ದೇಹ ಹೊರಗೆಳೆಯಲು ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಸಮಾಜ ಶುದ್ಧವಾಗಿರಬೇಕು ಎಂಬ ದೃಷ್ಟಿಯಲ್ಲಿ ಗೃಹಇಲಾಖೆ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತದೆ. ಪೊಲೀಸ್ ಶಾಲೆ ನಿರ್ಮಾಣಕ್ಕಾಗಿ ಮನವಿ ಬಂದಿದ್ದು ಪರಿಶೀಲನೆ ಮಾಡುತ್ತೇನೆ’ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಡಿಜಿಪಿ ಕೆ.ರಾಮಚಂದ್ರರಾವ್ ಮಾತನಾಡಿದರು.
ವೇದಿಕೆಯಲ್ಲಿ ಉಪ ಪೊಲೀಸ್ ಮಹಾನಿರ್ದೇಶಕ ಬಿ.ರಮೇಶ್, ಅಗ್ನಿಶಾಮಕ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ನಂಜುಂಡಸ್ವಾಮಿ, ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದ್ದರು.
‘ಕಟ್ಟಡ ಸೋರಿಕೆ ಕುರಿತ ವರದಿಯನ್ನು ಗಂಭೀರವಾಗಿ ಪರಿಗಣಿಸಿ’ ‘ತಾಂತ್ರಿಕ ವಿನ್ಯಾಸವನ್ನು ಖಚಿತಪಡಿಸಿಕೊಂಡು ಕಾಮಗಾರಿ ಆರಂಭಿಸಬೇಕು. ಕೆಲಸ ಮಾಡುವ ಅಧಿಕಾರಿಗಳು ಕಟ್ಟಡ ಹೆಚ್ಚು ಬಾಳಿಕೆ ಬರುವಂತೆ ರೂಪಿಸಬೇಕು. ಪೊಲೀಸ್ ಠಾಣೆ ಗ್ರಾಮೀಣಾಭಿವೃದ್ಧಿ ಭವನ ಕಟ್ಟಡ ಸೋರುತ್ತಿರುವುದಾಗಿ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ತಾಕೀತು ಮಾಡಿದರು. ‘ಬೇರೆಯವರ ಅವಧಿಯಲ್ಲಿ ಹೇಗೆಲ್ಲಾ ಕಟ್ಟಡ ಕಟ್ಟಿದ್ದಾರೆ ಎಂದು ಗೊತ್ತು’ ‘ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ್ದೇನೆ. ಹೊಸದಾಗಿ ಕಟ್ಟಿದ ಕಟ್ಟಡದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರುವುದನ್ನು ಸ್ವತಃ ಗಮನಿಸಿದ್ದೇನೆ. ಮಲೆನಾಡಿನಲ್ಲಿ ಕಟ್ಟಡ ಸೋರುವುದು ಸಹಜ. ಬೇರೆಯವರ ಅವಧಿಯಲ್ಲಿ ಹೇಗೆಲ್ಲಾ ಕಟ್ಟಡ ಕಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೋರುವಿಕೆಯ ತಪ್ಪುಗಳನ್ನು ಎಳೆಯುವುದರಲ್ಲಿ ಅರ್ಥವಿಲ್ಲ’ ಎಂದು ಶಾಸಕ ಆರಗ ಜ್ಞಾನೇಂದ್ರ ಸಮಜಾಯಿಷಿ ನೀಡಿದರು. ‘ನಮ್ಮ ಮನೆ ಸಹ ಸೋರುತ್ತೆ !’ ‘ಮಲೆನಾಡು ಭಾಗದಲ್ಲಿ ಎಷ್ಟು ಚೆನ್ನಾಗಿ ಕಟ್ಟಡ ಕಟ್ಟಿದರೂ ಸೋರುವುದು ಮಾಮೂಲಿ. ನಮ್ಮ ಮನೆಯೂ ಸೋರುತ್ತೆ. ಅದೇನು ಮಹಾ ಬಿಡಿ’ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಕಟ್ಟಡ ಸೋರಿಕೆಯನ್ನು ಸಮರ್ಥಿಸಿದರು. ಗ್ರಾಮೀಣಾಭಿವೃದ್ಧಿ ಭವನ ಕಟ್ಟಡ ಸೋರುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಶನಿವಾರ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.