ತೀರ್ಥಹಳ್ಳಿ: ಇಲ್ಲಿನ ಮೀನು ಮಾರುಕಟ್ಟೆ, ಮಾಂಸದ ಮಾರುಕಟ್ಟೆ ಹಾಗೂ ಸಂತೆ ಮಾರುಕಟ್ಟೆಗಳು ನಿರ್ವಹಣೆಯ ಕೊರತೆಯಿಂದ ಸೊರಗಿವೆ. ಈ ಮಾರುಕಟ್ಟೆಗಳಿಗೆ ವಾರದಲ್ಲಿ ಕನಿಷ್ಠ 15,000 ಗ್ರಾಹಕರು ಭೇಟಿ ನೀಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಈ ಸಂಖ್ಯೆ ಏರಿಕೆಯಾಗುತ್ತದೆ. ಆದರೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸಂತೆಗೆ ದೂರದ ಊರುಗಳಿಂದ ಬರುವ ಗ್ರಾಹಕರು ಹಾಗೂ ವ್ಯಾಪಾರಿಗಳಿಗಾಗಿ ಮೂರು ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ನೀರು ಸರಬರಾಜು ವ್ಯವಸ್ಥೆ ಸರಿಯಿಲ್ಲದ ಕಾರಣ ಅವು ಬಳಕೆಗೆ ಲಭ್ಯವಿಲ್ಲ. ಬಾಗಿಲು ಇಲ್ಲದ್ದರಿಂದ ಶೌಚಾಲಯಗಳಿಂದ ಮಹಿಳೆಯರು ದೂರ ಉಳಿದಿದ್ದಾರೆ. ಮೇಲೆ ಅಳವಡಿಸಿರುವ ಟ್ಯಾಂಕ್ ಒಡೆದಿದ್ದು, ನೀರು ಸೋರಿಕೆಯಾಗುತ್ತದೆ.
ಶೌಚಾಲಯದ ತ್ಯಾಜ್ಯವನ್ನು ನೇರವಾಗಿ ರಾಜಕಾಲುವೆಗೆ ಹರಿಸಲಾಗುತ್ತಿದೆ. ಈ ವಿಚಾರದ ಬಗ್ಗೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಾ ಚರ್ಚೆಯಾಗುತ್ತದೆ. ಇದಕ್ಕೆ ಪರಿಹಾರ ಸಿಕ್ಕಿಲ್ಲ. ನಾಗರಿಕರಿಗೆ ಸ್ವಚ್ಛತೆಯ ಕಿವಿಮಾತು ಹೇಳಬೇಕಿರುವ ಪಟ್ಟಣದ ಆಡಳಿತವೇ ನಿರಾಸಕ್ತಿ ವಹಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಎಲ್‌ಐಸಿ ಕಚೇರಿ ರಸ್ತೆಯಿಂದ ಹರಿಯುವ ಮಳೆ ನೀರು ನೇರವಾಗಿ ಸಂತೆ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗುತ್ತದೆ. ಮೀನು ಮಾರುಕಟ್ಟೆಯಲ್ಲಿ ಸ್ವಚ್ಛಗೊಳಿಸಲು ಬಳಕೆಯಾಗುವ ನೀರು ಒಣಮೀನು ಮಾರುಕಟ್ಟೆಗೆ ಹರಿಯುತ್ತದೆ. ಇದರಿಂದ ಸಾಮಗ್ರಿಗಳು ಹಾಳಾಗುತ್ತಿವೆ. ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ನೀರು ಹರಿಯಲು ಅವಕಾಶ ಇಲ್ಲದಂತಾಗಿದೆ. ಈ ಎಲ್ಲ ಅವ್ಯವಸ್ಥೆಗಳಿಂದ ರೋಸಿರುವ ಗ್ರಾಹಕರು, ಮನೆ ಬಾಗಿಲಿಗೆ ಬರುವ ವಾಹನದಲ್ಲಿ ತರಕಾರಿ, ಮೀನು ಖರೀದಿಸಲು ಮುಂದಾಗಿದ್ದಾರೆ.
ಆಧುನೀಕತೆಗೆ ಒಗ್ಗದ ಮಾರುಕಟ್ಟೆ:
ಮೀನು, ಒಣ ಮೀನು, ಮಾಂಸ ಮಾರುಕಟ್ಟೆಯಲ್ಲಿ ಆಧುನಿಕ ವ್ಯವಸ್ಥೆಗಳಿಲ್ಲ. ಇಂದಿಗೂ ಸಾರ್ವಜನಿಕವಾಗಿ ತೆರೆದ ಡಬ್ಬಗಳ ಮೇಲೆಯೇ ಮಾರಾಟ ನಡೆಯುತ್ತದೆ. ಬಹುತೇಕ ಸಂದರ್ಭದಲ್ಲಿ ಮೀನು, ಮಾಂಸವನ್ನು ನೊಣಗಳು ಮುತ್ತಿಕೊಂಡಿರುತ್ತವೆ. ಅವುಗಳನ್ನೇ ಕತ್ತರಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಹಾಳಾದ ಮೀನುಗಳನ್ನು ಅಲ್ಲಲ್ಲಿಯೇ ಎಸೆಯಲಾಗುತ್ತಿದ್ದು, ಇಡೀ ಪ್ರದೇಶ ಗಬ್ಬುನಾರುತ್ತಿವೆ.
ಈ ಮಾರುಕಟ್ಟೆಗೆ ಭೇಟಿ ನೀಡಿದರೆ ಮೀನು ತಿನ್ನುವುದಕ್ಕೆ ಮನಸ್ಸಾಗುವುದಿಲ್ಲ. ನೊಣಗಳು ವಿಪರೀತವಾಗಿ ಮುತ್ತಿಕೊಂಡಿರುತ್ತವೆ. ಸಂತೆ ಮಾರುಕಟ್ಟೆ ನಿರಾಶ್ರಿತರ ಕೇಂದ್ರವಾಗಿ ಬದಲಾಗಿದೆ ಎಂಬುದು ಗ್ರಾಹಕ ಅಮಿತ್ ಹೆಗ್ಗಾರ್ ದೂರು.
ಭದ್ರತೆ ನಗಣ್ಯ:
ಸಂತೆ ಮಾರುಕಟ್ಟೆಗೆ ತಡೆಗೋಡೆ ಅಥವಾ ಗೇಟ್ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಇದು ನಿರಾಶ್ರಿತರ ಕೇಂದ್ರವಾಗಿ ಬದಲಾಗುತ್ತದೆ. ಕಳೆದ ವರ್ಷ ಮೀನು ಮಾರುಕಟ್ಟೆಯಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿಯೊಬ್ಬರ ಕೊಲೆ ನಡೆದಿತ್ತು. ಸೋಮವಾರ ಹೊರತುಪಡಿಸಿ ವಾರವಿಡೀ ಈ ಸ್ಥಳ ಅವ್ಯವಹಾರದ ತಾಣವಾಗಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
₹ 12 ಲಕ್ಷ ಆದಾಯ
ಸಂತೆ ಮೀನು ಹಾಗೂ ಮಾಂಸದ ಮಾರುಕಟ್ಟೆಯಿಂದ ಅಂದಾಜು ವಾರ್ಷಿಕ ₹ 12 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ. ಮಾರುಕಟ್ಟೆ ಮೈದಾನಕ್ಕೆ ಜಾನುವಾರುಗಳು ಬಾರದಂತೆ ಕೌ ಕ್ಯಾಚರ್ ಅಳವಡಿಸಲಾಗಿದೆ. ಇಲ್ಲಿನ ವ್ಯವಸ್ಥೆ ಹಳೆಯದಾಗಿದ್ದು ಹೊಸ ಮಾದರಿಯ ಮಾರುಕಟ್ಟೆ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ. ಪೌರ ಕಾರ್ಮಿಕರ ಕೊರತೆಯಿಂದಾಗಿ ಸ್ವಚ್ಛತೆಗೆ ನಿಯೋಜನೆಯಲ್ಲಿ ಸಮಸ್ಯೆಯಾಗುತ್ತಿದೆ. ಸಂತೆ ಮುಗಿದ ಎರಡು ದಿನಗಳಲ್ಲಿ ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.