ತೀರ್ಥಹಳ್ಳಿ: ‘ಸೌಹಾರ್ದ ಕೆಣಕಿದರೆ ಸಮಾಜದ ಶಾಂತಿ ಹಾಳಾಗುತ್ತದೆ. ಪ್ರೀತಿ, ವಿಶ್ವಾಸ ಮರೆತು ಪರಸ್ಪರ ಕಿತ್ತಾಟ ನಡೆಸಿದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ’ ಎಂದು ನಿಯೋಜಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜೆ.ಕೆ.ರಮೇಶ್ ಅಭಿಪ್ರಾಯಪಟ್ಟರು.
ಬುಧವಾರ ವರ್ತಕರ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಒಬ್ಬರ ಸಂಸ್ಕೃತಿ, ಸಂಸ್ಕಾರ, ಅಸಮಾಧಾನ ಗುರುತಿಸಿ ಟೀಕಿಸುವ ಬದಲು ಭಾಗವಹಿಸದೆ ಪ್ರತಿಭಟಿಸುವ ತಾಳ್ಮೆ ಇರಬೇಕು. ಸಂಘರ್ಷಕ್ಕಿಳಿದರೆ ಅಶಾಂತಿ ಸೃಷ್ಟಿಯಾಗುತ್ತದೆ’ ಎಂದು ತಿಳಿಸಿದರು.
‘ಹೃದಯ ಪರಿಶುದ್ಧವಾಗಿದ್ದರೆ ಮನಸ್ಸಿನ ಆಲೋಚನೆ ಸೃಜನಶೀಲವಾಗಿರುತ್ತದೆ. ಸಾಹಿತ್ಯ ಓದುಗ ಮತ್ತು ಕರ್ತೃ ನಡುವೆ ಭಿನ್ನತೆ ಇದ್ದರೆ ಸಾಹಿತ್ಯ ವ್ಯಾಖ್ಯಾನ ಅರ್ಥವಾಗದು. ಸಮಾನ ಮನಸ್ಕರಾಗಿದ್ದರೆ ಮಾತ್ರ ಒಳಾರ್ಥ ಬಿಡಿಸಬಹುದು’ ಎಂದರು.
‘ಜೆ.ಕೆ.ರಮೇಶ್ ಯಾವತ್ತೂ ಪ್ರಚಾರ ಬಯಸದ ವ್ಯಕ್ತಿ. ತಪ್ಪುಗಳಿಗೆ ತಮ್ಮ ಸೌಮ್ಯ ಸ್ವಾಭಾವದ ಮೂಲಕವೇ ಕಠೋರವಾಗಿ ಟೀಕಿಸುವ ಗುಣವನ್ನು ರೂಪಿಸಿಕೊಂಡಿದ್ದಾರೆ’ ಎಂದು ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಹೇಳಿದರು.
ಸಂಘದ ನಿರ್ದೇಶಕ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿದರು. ಚೈತನ್ಯ ಜವಳಿ, ರಾಘವೇಂದ್ರ ಮಲ್ಯ, ಸಹನಾ ಭಟ್, ಯುವರಾಜ್ ಕೈಮರ, ಬಳಗಟ್ಟೆ ಗಿರೀಶ್, ಮಹಮ್ಮದ್ ಶಫಿ, ರಾಘವೇಂದ್ರ ಶೆಣೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.