ADVERTISEMENT

ತರಗತಿಗೆ ಹಾಜರಾಗದವರಿಗೂ ಪರೀಕ್ಷೆಗೆ ಅವಕಾಶ

ಎಂಡಿಎಫ್ ಬಿಇಡಿ ಕಾಲೇಜಿನಲ್ಲಿ ಅಕ್ರಮ: ಆಡಳಿತ ಮಂಡಳಿಯಿಂದಲೇ ಲೋಕಾಯುಕ್ತಗೆ ದೂರು

ಎಂ.ರಾಘವೇಂದ್ರ
Published 8 ಸೆಪ್ಟೆಂಬರ್ 2022, 7:34 IST
Last Updated 8 ಸೆಪ್ಟೆಂಬರ್ 2022, 7:34 IST

ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ಎಂಡಿಎಫ್)ದ ಅಂಗಸಂಸ್ಥೆಯಾಗಿರುವ ಡಾ.ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯವು ತರಗತಿಗೆ ಹಾಜರಾಗದೇ ಬೇರೆ ಕಡೆ ವೃತ್ತಿ ನಡೆಸುತ್ತಿರುವವರಿಗೆ ಬಿ.ಇಡಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರತಿಷ್ಠಾನದ ಈಗಿನ ಆಡಳಿತ ಮಂಡಳಿಯ ಖಜಾಂಚಿ ಕವಲಕೋಡು ವೆಂಕಟೇಶ್ ಅವರು ಕುವೆಂಪು ವಿಶ್ವವಿದ್ಯಾಲಯ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ಎಂಡಿಎಫ್ ಬಿ.ಇಡಿ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದಲ್ಲಿ 37 ಹಾಗೂ ದ್ವಿತೀಯ ವರ್ಷದಲ್ಲಿ 27 ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರೆಲ್ಲ ಬೇರೆ ಬೇರೆ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ನಿಯಮಬಾಹಿರವಾಗಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಲೇಜಿನ ಪ್ರಾಂಶುಪಾಲರ ಪತ್ರದ ಪ್ರಕಾರ ಎಂಡಿಎಫ್ ನ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಶ್ರೀನಿವಾಸ್, ಉಪಾಧ್ಯಕ್ಷ ಶ್ರೀಪಾದರಾವ್ ನಿಸರಾಣಿ, ಕಾರ್ಯದರ್ಶಿ ಎಂ.ಜಗದೀಶ್, ಸಹಕಾರ್ಯದರ್ಶಿಗಳಾದ ಗಿರೀಶ್ ಕೋವಿ ಮತ್ತು ಬಿ.ಎಂ. ಪ್ರದೀಪ್ ಅವರ ಆದೇಶದ ಮೇರೆಗೆ ತರಗತಿಗೆ ಹಾಜರಾಗದೆ ಇರುವವರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ತರಗತಿಗೆ ಹಾಜರಾಗದೇ ಪರೀಕ್ಷೆ ಬರೆಯಲು ಅವಕಾಶ ನೀಡಲು ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗಿದೆ ಎಂಬ ವಿಷಯವನ್ನೂ ದೂರು ಒಳಗೊಂಡಿದೆ.

ಏಕಕಾಲದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಇರುವ ಬಗ್ಗೆ ಹಾಜರಾತಿ ತೋರಿಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಬಿಇಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡುವ ವಿಷಯದಲ್ಲಿ ವಿಶ್ವವಿದ್ಯಾಲಯದ ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದುತಿಳಿಸಲಾಗಿದೆ.

ದೂರಿನೊಂದಿಗೆ ಶಿಕ್ಷಣ ಮಹಾವಿದ್ಯಾಲದ ಪ್ರಾಂಶುಪಾಲರು ನೀಡಿರುವ ಪತ್ರದ ನಕಲು,1 ಮತ್ತು 2ನೇ ವರ್ಷದಲ್ಲಿ ಅಕ್ರಮ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ, ತರಗತಿ ಹಾಜರಾತಿ ಪುಸ್ತಕದ ನಕಲನ್ನು ಸಲ್ಲಿಸಲಾಗಿದೆ.

‘ಹಿಂದಿನ ಆಡಳಿತ ಮಂಡಳಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಲೋಪ ಎಸಗಿದ್ದು, ಆ ಬಗ್ಗೆ ಕೂಡ ಲೋಕಯುಕ್ತರಿಗೆ ದೂರು ನೀಡಲಾಗುವುದು’ ಎಂದು ಎಂಡಿಎಫ್‌ಖಜಾಂಚಿಕವಲಕೋಡು ವೆಂಕಟೇಶ್ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮಾತ್ರ ಸರ್ಕಾರದ ಸೂಚನೆಯಂತೆ ತರಗತಿಗಳಿಗೆ ಹಾಜರಾಗದೆ ಇದ್ದವರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ನಂತರ ಆ ರೀತಿ ಆಗಿಲ್ಲ. ನಮ್ಮ ಮೇಲಿನ ದ್ವೇಷದ ಕಾರಣಕ್ಕೆ ಆಡಳಿತ ಮಂಡಳಿ ಸುಳ್ಳು ದೂರು ದಾಖಲಿಸಿದೆ.

–ಶ್ರೀಪಾದರಾವ್ ನಿಸರಾಣಿ, ಎಂಡಿಎಫ್ ನಿಕಟಪೂರ್ವ ಉಪಾಧ್ಯಕ್ಷ

ಬೇರೆ ಕಡೆ ಕೆಲಸ ನಿರ್ವಹಿಸುತ್ತಿದ್ದು ತರಗತಿಗಳಿಗೆ ಹಾಜರಾಗದೆ ಇದ್ದವರಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದು ಮೇಲ್ನೋಟಕ್ಕೆ ದಾಖಲೆಗಳ ಮೂಲಕ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಲಾಗಿದೆ.

–ಕವಲಕೋಡು ವೆಂಕಟೇಶ್, ಖಜಾಂಚಿ, ಎಂಡಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.