ಸಾಗರ: ಯಕ್ಷಗಾನ- ತಾಳಮದ್ದಲೆಯ ಸಮಯ ಮಿತಿ ಪ್ರದರ್ಶನ ಕಲೆಯ ಬೆಳವಣಿಗೆಗೆ ಪೂರಕವಾದ ಸಂಗತಿಯಾಗಿದೆ ಎಂದು ತಾಳಮದ್ದಲೆ ಕಲಾವಿದ ಬಿ.ಟಿ.ಅರುಣ ಬೆಂಕಟವಳ್ಳಿ ಹೇಳಿದರು.
ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಭಾನುವಾರ ಏರ್ಪಡಿಸಿದ್ದ ವಿಜಯ ಶೀರ್ಷಿಕೆಯ ಸರಣಿ ತಾಳಮದ್ದಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಒಂದು ಪ್ರದರ್ಶನ ಅಥವಾ ಪ್ರಸ್ತುತಿ ನಿರ್ದಿಷ್ಟ ಸಮಯ ಮಿತಿಗೆ ಒಳಪಟ್ಟಾಗ ಕಲಾವಿದರು ಪ್ರಸಂಗದ ಒಟ್ಟಾರೆ ಚೌಕಟ್ಟಿಗೆ ಧಕ್ಕೆಯಾಗದಂತೆ ರಂಗದ ಮೇಲೆ ತರುವ ಸಿದ್ಧತೆಯನ್ನು ಮಾಡಿಕೊಂಡಿರುತ್ತಾರೆ. ಅದೇ ರೀತಿ ಪ್ರೇಕ್ಷಕರು ಕೂಡ ಇಂತಿಷ್ಟು ಸಮಯ ಪ್ರದರ್ಶನ ವೀಕ್ಷಣೆಗೆ ಮೀಸಲಿಡಬೇಕು ಎಂಬ ಮಾನಸಿಕ ಸಿದ್ಧತೆಯೊಂದಿಗೆ ಬರುವುದರಿಂದ ಕಲೆಯ ಸಂಪೂರ್ಣ ಆಸ್ವಾದನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಲಾ ಪ್ರದರ್ಶನದ ಅವಧಿಗೆ ನಿಶ್ಚಿತತೆ ಎಂಬುದು ಇಲ್ಲದಿದ್ದರೆ ಕತೆಯ ಆವರಣದ ಚೌಕಟ್ಟನ್ನು ಅದು ಮೀರುವ ಅಪಾಯವಿರುತ್ತದೆ. ಸಮಯ ಮಿತಿ ಪ್ರದರ್ಶನದಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಪ್ರೇಕ್ಷಕರ ತಾಳ್ಮೆ ಕೆಡದಂತೆ ಪಾತ್ರ ಪೋಷಣೆ ನಿರ್ವಹಣೆಗೆ ಅವಕಾಶವಿರುತ್ತದೆ ಎಂದರು.
ಕಾರ್ಯಕ್ರಮವನ್ನು ನಿವೃತ್ತ ಕೆಪಿಸಿ ಅಧಿಕಾರಿ ಎನ್.ಎಸ್.ಕೃಷ್ಣ ಬಣ್ಣೂಮನೆ ಉದ್ಘಾಟಿಸಿದರು. ವೈದ್ಯ ಲೇಖಕ ಡಾ.ಎಚ್.ಎಸ್. ಮೋಹನ್ ಇದ್ದರು. ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ಗುರು ವಿಜಯ’ ತಾಳಮದ್ದಲೆ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು. ಸೂರ್ಯನಾರಾಯಣ, ಶರತ್ ಜಾನಕೈ, ನಾಗಭೂಷಣ ಕೇಡಲಸರ, ರವಿಶಂಕರ್ ಭಟ್, ಅಶೋಕ್ ಕುಮಾರ್ ಹೆಗಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.