ಶಿಕಾರಿಪುರ: ತೊಗರ್ಸಿ ಶ್ರೀ ಚನ್ನಮಲ್ಲಿಕಾರ್ಜುನ ಜಾತ್ರೆ ಸಮಯದಲ್ಲಿ ದಾಸೋಹ ನಡೆಸುವುದನ್ನು ಒಂದು ದಿನಕ್ಕೆ ಮೊಟಕುಗೊಳಿಸಿರುವುದು ಜಾತ್ರೆ, ಮಳೇಹಿರೇಮಠದ ದಾಸೋಹ ಪರಂಪರೆಗೆ ಧಕ್ಕೆಯಾಗಿದ್ದು, ಮುಂದೆ ಹಾಗಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ದೇವಸ್ಥಾನ ಭಕ್ತ ಮಂಡಳಿಯ ಮುಖಂಡ, ವೀರಶೈವ ಮಹಾಸಭಾ ಸೊರಬ ತಾಲ್ಲೂಕು ಘಟಕದ ಅಧ್ಯಕ್ಷ ವಿರೇಶ್‌ಗೌಡ ಎಚ್ಚರಿಸಿದರು.
ಪಟ್ಟಣದಲ್ಲಿ ಬುಧವಾರ ಶ್ರೀ ಚನ್ನಮಲ್ಲಿಕಾರ್ಜುನ ದೇವಸ್ಥಾನ ಭಕ್ತರ ಮಂಡಳಿ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜಾತ್ರೆಯಲ್ಲಿ ಎರಡು ದಿನ ಅನ್ನದಾಸೋಹ ನಡೆಸುವ ಪರಂಪರೆ ಇತ್ತು. ಆದರೆ, ಮುಜರಾಯಿ ಇಲಾಖೆ ಈ ಬಾರಿಯ ಜಾತ್ರೆ ಸಂದರ್ಭದಲ್ಲಿ ಒಂದು ದಿನಕ್ಕೆ ದಾಸೋಹ ಸೀಮಿತಗೊಳಿಸಿದೆ. ಮಳೇಹಿರೇಮಠದ ವತಿಯಿಂದ ಅನ್ನದಾಸೋಹ ನಡೆಸುವುದಕ್ಕೆ ಅನುಮತಿ ನೀಡದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಗೌಡ ಕುಮ್ಮೂರು, ಹೇಮರಾಜ್, ಕುಮಾರಸ್ವಾಮಿ ಹಿರೇಮಠ, ಗುತ್ತಿ ನಾಗರಾಜ್, ಚನ್ನವೀರಯ್ಯ, ಶಿವಯ್ಯ ಹಿರೇಮಠ, ಸಂದೀಪ್ ಅಂಬಾರಗೊಪ್ಪ, ದೇವರಾಜ್ ಅರಳೀಹಳ್ಳಿ, ಶರತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.