ADVERTISEMENT

ಅಪೂರ್ಣ ಬಾವಿ: ಅಪಾಯಕ್ಕೆ ಆಹ್ವಾನ

ಸಾರ್ವಜನಿಕ ಬಾವಿ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 7:36 IST
Last Updated 14 ಜುಲೈ 2024, 7:36 IST
ಕುದರೂರು ಗ್ರಾಮದ ಹೊನಗೋಡು ಬಳಿ ಇರುವ ತೆರೆದ ಬಾವಿ
ಕುದರೂರು ಗ್ರಾಮದ ಹೊನಗೋಡು ಬಳಿ ಇರುವ ತೆರೆದ ಬಾವಿ   

ಬ್ಯಾಕೋಡು (ತುಮರಿ): ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿರುವ ಬಾವಿ ಕಾಮಗಾರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನಗೋಡು ಗ್ರಾಮದಲ್ಲಿ ಕಳೆದ 10 ತಿಂಗಳ ಹಿಂದೆ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಕಾಮಗಾರಿ ಪ್ರಾರಂಭವಾಗಿತ್ತು. 10 ತಿಂಗಳು ಕಳೆದರೂ ಅಧಿಕಾರಿಗಳು ಕಾಮಗಾರಿ ಮುಗಿಸುವ ಗೋಜಿಗೆ ಹೋಗಿಲ್ಲ. 30 ಅಡಿ ಆಳದ ಬಾವಿ ತೋಡಿ, ತೆರೆದ ಸ್ಥಿತಿಯಲ್ಲಿ ಹಾಗೆಯೇ ಬಿಟ್ಟಿರುವುದು ಅಪಾಯಕ್ಕೆ ಎಡೆಮಾಡಿಕೊಡುವಂತಿದೆ.

ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಾವಿಗೆ ಸಿಮೆಂಟ್ ರಿಂಗ್ ಜೋಡಿಸಿ ಕಾಮಗಾರಿ ಅಂತಿಮಗೊಳಿಸುವ ಕೆಲಸ ಸ್ಥಳೀಯ ಗ್ರಾಮ ಪಂಚಾಯಿತಿಯ ಜವಾಬ್ದಾರಿ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಬಾವಿ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ಮೋಹನ್.

ADVERTISEMENT

ಒಂದೆಡೆ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ಹಣ ಇದೆ ಎನ್ನುತ್ತಿದೆ. ಇತ್ತ ಕುದರೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಬಾವಿ ಕಾಮಗಾರಿ ಅಪೂರ್ಣ ಮಾಡಿ, ಸರ್ಕಾರದ ಹಣ ಪೋಲು ಮಾಡುತ್ತಿದ್ದಾರೆ. ಹೀಗೆ ಹಣ ಪೋಲಾಗುತ್ತಿರುವುದರಲ್ಲಿ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥ ಮಂಜುನಾಥ್ ಆರೋಪಿಸಿದ್ದಾರೆ. 

ಗ್ರಾಮ ಪಂಚಾಯಿತಿಗಳು ಯಾವುದೇ ಕಾಮಗಾರಿ ನಡೆಸುವಾಗ ಸುರಕ್ಷಿತ ಕ್ರಮ ವಹಿಸಬೇಕು. 10 ತಿಂಗಳಿಂದ ಅಪೂರ್ಣ ಕಾಮಗಾರಿ ನಡೆಸಿ ಸುರಕ್ಷತಾ ಕ್ರಮವನ್ನೂ ವಹಿಸದೇ ನಿರ್ಲಕ್ಷ ತೋರಿದ್ದಾರೆ. ಮಳೆಯಿಂದ ಕುಸಿತವಾಗುತ್ತಿರುವ ಬಾವಿಗೆ ರಿಂಗ್ ಹಾಕಿಸಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಸಾರ್ವಜನಿಕರ ದೂರಿನ ಹಿನ್ನೆಲೆ ಕಾಟಾಚಾರಕ್ಕೆ ಬಾವಿ ಸುತ್ತ ಪ್ಲಾಸ್ಟಿಕ್ ನೆಟ್ ಕಟ್ಟಿ ಹೋಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಪಾಯದಲ್ಲಿ ಕಾಮಗಾರಿ: ಬಾವಿಯ ಅಂಚಿನಲ್ಲಿಯೇ ರಸ್ತೆ ಹಾದು ಹೋಗಿದೆ. 50 ಅಡಿ ಆಳದ ಬಾವಿ ಇರುವುದು ಇಲ್ಲಿಯ ನಿವಾಸಿಗಳಿಗೆ ಮಾತ್ರ ತಿಳಿದಿದೆ. ಅಪರಿಚಿತರು ರಾತ್ರಿ ವೇಳೆ ಬಂದರೆ ಅಪಾಯ ತಪ್ಪಿದ್ದಲ್ಲ. ಆದರೆ ಅಧಿಕಾರಿಗಳು ಇಂದಿಗೂ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಾವಿಗೆ ಸಿಮೆಂಟ್ ರಿಂಗ್ ಆಳವಡಿಸಬೇಕಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಾವಿ ಸುತ್ತ ಸುರಕ್ಷತೆಯ ದೃಷ್ಟಿಯಿಂದ ಬೇಲಿ ನಿರ್ಮಾಣ ಮಾಡಲಾಗಿದೆ

- ವಿಶ್ವನಾಥ್ ಪಟ್ಟಣ ಶೆಟ್ಟಿ ಪಿಡಿಒ ಕುದರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.