ADVERTISEMENT

ತುಮರಿ: ಹದಗೆಟ್ಟ ರಸ್ತೆಗೆ ಗ್ರಾಮಸ್ಥರಿಂದ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:09 IST
Last Updated 19 ಸೆಪ್ಟೆಂಬರ್ 2025, 6:09 IST
ತುಮರಿ ಗ್ರಾಮದಿಂದ ಅರಬಳ್ಳಿ, ಗೋಳಗೋಡು ಇತರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು. 
ತುಮರಿ ಗ್ರಾಮದಿಂದ ಅರಬಳ್ಳಿ, ಗೋಳಗೋಡು ಇತರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು.    

ತುಮರಿ: ಗ್ರಾಮದ ರಸ್ತೆಗಳ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನನ್ನೇ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಬೇಸತ್ತು ಕರೂರು ಹೋಬಳಿಯ ಅರಬಳ್ಳಿ, ಗೋಳಗೋಡು ಗ್ರಾಮಗಳ ಜನರು ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದ ಗುಂಡಿಗಳಿಗೆ ಸ್ವತಃ ತಾವೇ ಜಲ್ಲಿಕಲ್ಲು, ಮಣ್ಣು ತುಂಬಿಸುವ ಮೂಲಕ ಸರಿಪಡಿಸಿಕೊಂಡು ಮಾದರಿಯಾಗಿದ್ದಾರೆ.

ತುಮರಿಯಿಂದ ಅರಬಳ್ಳಿಗೆ ಹೊಂದಿಕೊಂಡಂತೆ ಇರುವ ಬಾಳೆಕಾಯಿ ಜಡ್ಡು, ಹಲ್ಕೆರೆ, ಗೋಳಗೋಡು, ಹಾಡಿತಗ್ಗು, ಗುಜರಿಪೇಟೆ ಹಳ್ಳಿ ಸೇರಿದಂತೆ ಒಟ್ಟು 67 ಕುಟುಂಬಗಳಿಗೆ ಈ ರಸ್ತೆಯು ಸಂಪರ್ಕ ಕೊಂಡಿಯಾಗಿದೆ.

ಈ ಗ್ರಾಮಗಳು ಮುಖ್ಯರಸ್ತೆಯಿಂದ 3 ಕಿಲೋಮೀಟರ್‌ ದೂರದಲ್ಲಿವೆ. ಕಳೆದ ವರ್ಷ ಮುಖ್ಯ ರಸ್ತೆಯಿಂದ ಗ್ರಾಮದ ರಸ್ತೆಗೆ ಗ್ರಾವೆಲ್ ಹಾಕಿದ್ದರೂ ಈ ವರ್ಷ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋಗಿದ್ದರಿಂದ ಗ್ರಾಮಸ್ಥರೆ ರಸ್ತೆ ಅಭಿವೃದ್ಧಿಯ ನಿರ್ಧಾರ ಕೈಗೊಂಡರು.

ADVERTISEMENT

ಮೊದಲ ದಿನ ರೈತ ರಾಮಚಂದ್ರ ಗೋಳಗೋಡು ಮಾತ್ರ ಒಬ್ಬರೇ ರಸ್ತೆ ದುರಸ್ತಿಗೆ ಮುಂದಾದರು. ಇವರ ಸಾಮಾಜಿಕ ಕಳಕಳಿ ನೋಡಿದ ಗ್ರಾಮಸ್ಥರು ದಿನಕಳೆದಂತೆ ಒಬ್ಬೊಬ್ಬರಾಗಿ ಕೈಜೋಡಿಸಿದರು. 5 ದಿನ ಕಳೆಯುವ ಹೊತ್ತಿಗೆ 9ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡರು. ‘ಕೂಡಿ ಬಾಳುವ ಜೊತೆಗೆ ಒಟ್ಟಾಗಿ ಗ್ರಾಮದ ಅಭಿವೃದ್ಧಿಗೆ ನಾವೆಲ್ಲಾ ಶ್ರಮಿಸೋಣ’ ಎಂಬ ನಿಲುವು ರಸ್ತೆಯ ಅಭಿವೃದ್ಧಿಗೆ ಕಾರಣವಾಗಿದೆ.

‘ಮಣ್ಣು ಮತ್ತು ಜಲ್ಲಿಕಲ್ಲು ತರಲು ಗ್ರಾಮದ ಪ್ರಕಾಶ್ ಸ್ವಂತ ಟ್ರ್ಯಾಕ್ಟರ್‌ ನೀಡಿ ಯಾವುದೇ ಬಾಡಿಗೆ ಪಡೆಯದೇ ಸಹಾಯ ಮಾಡಿದರು. ಯಾವುದೇ ಯಂತ್ರ ಬಳಸದೇ ನಾವೇ ಗುದ್ದಲಿ, ಪಿಕಾಸಿ ಬಳಸಿ ರಸ್ತೆ ದುರಸ್ತಿ ಮಾಡಿದ್ದೇವೆ’ ಎಂದು ಗ್ರಾಮಸ್ಥರಾದ ಪ್ರಕಾಶ್, ನಾಗರಾಜ್, ಸುಮುಖ, ರೋಹಿತ್ ಮತ್ತಿತರರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಸ್ಥರಿಂದಲೇ ದುರಸ್ತಿ ಕಾರ್ಯ ಮಾಡಿರುವ ತುಮರಿ ಅರಬಳ್ಳಿ ರಸ್ತೆ ಮಾರ್ಗ

‘ಪೂರ್ವಜರು ಹಲವು ದಶಕಗಳ ಹಿಂದೆ ಅವರವರ ಜಮೀನಿನ ಸಮೀಪವೇ ನೆಲೆಸಿದ್ದರು. ಇದು ಮುಂದೆ ಅರಬಳ್ಳಿ ಗ್ರಾಮವಾಗಿ ಗುರುತಿಸಿಕೊಂಡಿದ್ದು, ಇಂದಿಗೂ ವ್ಯವಸ್ಥಿತ ರಸ್ತೆಯಾಗಲೀ, ಚರಂಡಿಯಾಗಲೀ ನಿರ್ಮಾಣಗೊಂಡಿಲ್ಲ. ಸಂಚಾರಕ್ಕಾಗಿ ಇರುವ ಇದೊಂದೇ ರಸ್ತೆಯ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು’ ಎಂದು ರಾಮಚಂದ್ರ ಗೋಳಗೋಡು ತಿಳಿಸಿದರು.

‘ಮಳೆಗಾಲದಲ್ಲಿ ನಮ್ಮ ಮಕ್ಕಳು ಶಾಲೆಗೆ ಹೋಗಲು ಕಷ್ಟಪಡುತ್ತಿರುವುದನ್ನು ನೋಡಲಾರದೆ ಸರ್ಕಾರ ಹಾಗೂ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ನಾರೆಲ್ಲರೂ ಸೇರಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ‌ಗಳಿಗೆ ಕಲ್ಲು, ಮಣ್ಣು ಮುಚ್ಚಿದ್ದೇವೆ. ಪ್ರತಿಯೊಂದು ಗ್ರಾಮಕ್ಕೂ ಕನಿಷ್ಠ ಸೌಲಭ್ಯ ಒದಗಿಸಿಕೊಡುವುದು ಸರ್ಕಾರದ ಕೆಲಸ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗಮನ ಹರಿಸಬೇಕು’ ಎಂದು ಅವರು ಕೋರಿದರು.

ತುಮರಿ ಗ್ರಾಮದಿಂದ ಅರಬಳ್ಳಿ ಗೋಳಗೋಡು ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು. 
ಕಾಂಕ್ರೀಟ್ ರಸ್ತೆ ನಿರ್ಮಿಸಲು ಮನವಿ
ಪ್ರತಿವರ್ಷವೂ ಮಳೆಗಾಲ ಕಳೆದ ನಂತರ ಈ ರಸ್ತೆಯ ದುರಸ್ತಿ ಮಾಡಲೇಬೇಕಿದೆ. ಇಲ್ಲದಿದ್ದರೆ ತಾಲ್ಲೂಕು ಕೇಂದ್ರವಾಗಲೀ ಗ್ರಾಮ ಪಂಚಾಯಿತಿ ಕಚೇರಿ ಇರುವ ಸ್ಥಳಕ್ಕಾಗಲೀ ಹೋಗುವುದು ಕಷ್ಟಕರವಾಗುತ್ತದೆ ಎಂಬುದು ಸ್ಥಳೀಯರ ಗೋಳು. ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಸರುಮಯ ರಸ್ತೆಯಲ್ಲಿ ನಿತ್ಯ ಸಾಗಲು ಕಷ್ಟಪಡುತ್ತಾರೆ. ಇಲ್ಲಿ ತುರ್ತಾಗಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.