ADVERTISEMENT

ಶಿವಮೊಗ್ಗ | ತುಂಗ–ಭದ್ರಾ; 1.17 ಲಕ್ಷ ಕ್ಯುಸೆಕ್ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:24 IST
Last Updated 19 ಆಗಸ್ಟ್ 2025, 4:24 IST
<div class="paragraphs"><p>ಹೊಳೆಹೊನ್ನೂರು ಸಮೀಪದ ಕೂಡಲಿ ಗ್ರಾಮದಲ್ಲಿ ತುಂಗ– ಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು</p></div>

ಹೊಳೆಹೊನ್ನೂರು ಸಮೀಪದ ಕೂಡಲಿ ಗ್ರಾಮದಲ್ಲಿ ತುಂಗ– ಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು

   

ಶಿವಮೊಗ್ಗ: ಚಿಕ್ಕಮಗಳೂರಿನ ಜಲಾನಯನ ಪ್ರದೇಶದಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಹೀಗಾಗಿ ಮಲೆನಾಡಿನ ಜೀವನಾಡಿಗಳಾದ ತುಂಗ ಹಾಗೂ ಭದ್ರಾ ನದಿಗಳು ಭೋರ್ಗರೆಯುತ್ತಿವೆ.

ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿ ಆಗಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಗೆ ಒಂದು ಅಡಿ ನೀರು ಮಾತ್ರ ಬೇಕಿಯಿದೆ. 186 ಅಡಿ ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಸದ್ಯ 185 ಅಡಿ ನೀರಿದೆ. ಜಲಾಶಯದ ಸುರಕ್ಷತೆಯ ಕಾರಣ ಸಂಪೂರ್ಣ ಭರ್ತಿ ಮಾಡದೇ ನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ.

ADVERTISEMENT

ಹೀಗಾಗಿ, ಸೋಮವಾರ ಭದ್ರಾ ಜಲಾಶಯವು ಒಳಹರಿವಿಗಿಂತ ಹೆಚ್ಚು ಹೊರಹರಿವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದಲ್ಲಿ 180.1 ಅಡಿ ನೀರಿನ ಸಂಗ್ರಹವಿತ್ತು. 7,040 ಕ್ಯುಸೆಕ್‌ ಒಳಹರಿವು ದಾಖಲಿಸಿತ್ತು. ಭದ್ರಾ ಜಲಾಶಯದಿಂದ ನದಿಗೆ ಮಾತ್ರವಲ್ಲದೇ ಈಗ ಎಡದಂಡೆ– ಬಲದಂಡೆ, ಮೇಲ್ದಂಡೆ ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ.

ತುಂಗಭದ್ರೆಗೆ 1.17 ಲಕ್ಷ ಕ್ಯುಸೆಕ್ ನೀರು:

588.24 ಮೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯವಿರುವ ತುಂಗಾ ಜಲಾಶಯ ಭರ್ತಿ ಆಗಿದ್ದು, 77,000 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಭದ್ರಾ ಜಲಾಶಯದಿಂದ 40,000 ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಿರುವುದರಿಂದ ತುಂಗಭದ್ರಾ ನದಿಯಲ್ಲಿ ಒಟ್ಟು 1.17 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ. ಶಿವಮೊಗ್ಗ ಬಳಿಯ ಕೂಡಲಿ ಬಳಿ ತುಂಗ–ಭದ್ರಾ ಸಂಗಮ ಸ್ಥಳ ಮೈದುಂಬಿದ್ದು, ಸಾವಿರಾರು ಮಂದಿ ನದಿಯ ಆರ್ಭಟವನ್ನು ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.