ADVERTISEMENT

ಮೇನಲ್ಲೇ ತುಂಬಿದ ತುಂಗಾ ಜಲಾಶಯ: ಮೊದಲ ಬಾರಿಗೆ ಮುಂಗಾರು ಹಂಗಾಮಿನ ಮುನ್ನವೇ ಭರ್ತಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:03 IST
Last Updated 26 ಮೇ 2025, 16:03 IST
ಮುಂಗಾರು ಪೂರ್ವ ಮಳೆಗೆ ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿದ್ದು, ಅದರ ವಿಹಂಗಮ ನೋಟ
– ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್
ಮುಂಗಾರು ಪೂರ್ವ ಮಳೆಗೆ ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿದ್ದು, ಅದರ ವಿಹಂಗಮ ನೋಟ – ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿದ್ದು, ಸೋಮವಾರ 17,500 ಕ್ಯುಸೆಕ್ ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗಿದೆ.

ತುಂಗೆಗೆ ನೂತನ ಅಣೆಕಟ್ಟು ನಿರ್ಮಾಣಗೊಂಡು (2008) 17 ವರ್ಷಗಳಲ್ಲಿಯೇ ಮೊದಲ ಬಾರಿಗೆ ಮುಂಗಾರು ಹಂಗಾಮು ಆರಂಭಕ್ಕೆ ಮುಂಚೆಯೇ ಜಲಾಶಯ ಭರ್ತಿ ಆಗಿದೆ.

588.24 ಮೀಟರ್ ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಸದ್ಯ 17,500 ಮೀಟರ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ 22 ಕ್ರಸ್ಟ್‌ಗೇಟ್‌ಗಳ ಪೈಕಿ 10 ಗೇಟ್ ತೆರೆದು 12,500 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಉಳಿದ 5,000 ಕ್ಯುಸೆಕ್ ನೀರನ್ನು ವಿದ್ಯುತ್ ಉತ್ಪಾದನಾ ಕೇಂದ್ರದಿಂದ ನದಿಗೆ ಹರಿಸಲಾಗುತ್ತಿದೆ ಎಂದು ತುಂಗಾ ಜಲಾಶಯ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ತಿಳಿಸಿದ್ದಾರೆ.

ADVERTISEMENT
ಗಾಜನೂರು ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ

ನದಿಗೆ ನೀರು: ಎಚ್ಚರಿಕೆ

ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಾ ಜಲಾಶಯದ  ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಳವಾಗಲಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರದಿಂದ ಇರಬೇಕು. ದನಕರುಗಳನ್ನು ನದಿಗೆ ಬಿಡಬಾರದು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕೋರಿದ್ದಾರೆ.

ಭದ್ರಾ ಲಿಂಗನಮಕ್ಕಿ ಒಳಹರಿವು ಹೆಚ್ಚಳ

ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಭಾನುವಾರ 150 ಕ್ಯುಸೆಕ್ ಇದ್ದ ಒಳಹರಿವು ಸೋಮವಾರ 3500 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಹೀಗಾಗಿ ಜಲಾಶಯದಲ್ಲಿನ ನೀರಿನಮಟ್ಟ 136 ಅಡಿಯಿಂದ 137.6 ಅಡಿಗೆ ಹೆಚ್ಚಳಗೊಂಡಿದೆ. ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯದಲ್ಲೂ ಒಳಹರಿವು ಹೆಚ್ಚಾಗಿದೆ. ಭಾನುವಾರ 10900 ಕ್ಯುಸೆಕ್ ಇದ್ದ ಒಳಹರಿವು ಸೋಮವಾರ 17530 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಜಲಾಶಯದ ಗರಿಷ್ಠ ಸಂಗ್ರಹ ಮಟ್ಟ 1819 ಅಡಿ ಇದ್ದು ಈಗ 1764.84 ಅಡಿ ನೀರು ಸಂಗ್ರಹವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.