ADVERTISEMENT

ನಿರ್ಮಲ ತುಂಗಭದ್ರಾ ಅಭಿಯಾನ ಡಿ.27ರಿಂದ: ಪ್ರೊ.ಬಿ.ಎಂ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:53 IST
Last Updated 26 ಡಿಸೆಂಬರ್ 2025, 2:53 IST
ಪ್ರೊ.ಬಿ.ಎಂ.ಕುಮಾರಸ್ವಾಮಿ
ಪ್ರೊ.ಬಿ.ಎಂ.ಕುಮಾರಸ್ವಾಮಿ   

ಶಿವಮೊಗ್ಗ: ‘ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಹಮ್ಮಿಕೊಂಡಿರುವ ಮೂರನೇ ಹಂತದ ಜಾಗೃತಿ ಅಭಿಯಾನವು ಡಿ.27ರಿಂದ ಜ.4ರವರೆಗೆ ನಡೆಯಲಿದೆ’ ಎಂದು ಪರ್ಯಾವರಣ ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.

‘ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾ ಅಭಿಯಾನದ ಸಹಯೋಗದಲ್ಲಿ ಆಯೋಜಿಸಿರುವ ಮೂರನೇ ಹಂತದ ಈ ಪಾದಯಾತ್ರೆಗೆ ಡಿ.27ರಂದು ಗಂಗಾವತಿಯ ಹಿರೇಜಂತಕಲ್‌ನಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಮೊಮ್ಮಗಳು ರಾಜೇಶ್ವರಿ ಚೌಧರಿ ಚಾಲನೆ ನೀಡಲಿದ್ದಾರೆ. ಪಾದಯಾತ್ರೆ ಜನವರಿ 4ರಂದು ಮಂತ್ರಾಲಯ ತಲುಪಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

‘ಶೃಂಗೇರಿಯಿಂದ ಮಂತ್ರಾಲಯದವರೆಗಿನ 600 ಕಿ.ಮೀ ಪಾದಯಾತ್ರೆ ಇದಾಗಿದೆ. ಮೊದಲ ಹಂತದಲ್ಲಿ ಈಗಾಗಲೇ ಶೃಂಗೇರಿಯಿಂದ ಹರಿಹರ, ಎರಡನೇ ಹಂತದಲ್ಲಿ ಹರಿಹರದಿಂದ ಗಂಗಾವತಿ (ಕಿಷ್ಕಿಂದೆ)ವರೆಗೆ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಅದರ ಫಲವಾಗಿ ತೀರ್ಥಹಳ್ಳಿಯಲ್ಲಿ ತುಂಗಾನದಿ ಸ್ವಚ್ಛತೆಗೆ ₹ 25 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ಅಲ್ಲಿ ನದಿ ನೀರಿನ ಸಂಸ್ಕರಣೆಗೆ ಶ್ರೀ ಮಠದ ಜಾಗ ನೀಡುವುದಾಗಿ ಶೃಂಗೇರಿ ಶ್ರೀಗಳು ತಿಳಿಸಿದ್ದಾರೆ. ಹರಿಹರಪುರ ಮಠದಲ್ಲಿಯೂ ತುಂಗಾನದಿ ನೀರಿನ ಸಂಸ್ಕರಣೆ ಪ್ರಕ್ರಿಯೆ ಆರಂಭವಾಗಿವೆ’ ಎಂದರು.

ADVERTISEMENT

‘3ನೇ ಹಂತದ ಪಾದಯಾತ್ರೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ 9 ತಾಲ್ಲೂಕುಗಳ ಮೂಲಕ ಸಾಗಲಿದೆ. ರಾಜಸ್ಥಾನದ ಜಲತಜ್ಞ ರಾಜೇಂದ್ರಸಿಂಗ್, ರಾಜಮಾತೆ ಲಲಿತಾರಾಣಿ, ಗದಗದ ಮಾಜಿ ಶಾಸಕ ಡಿ.ಆರ್. ಪಾಟೀಲ ಪಾಲ್ಗೊಳ್ಳಲಿದ್ದಾರೆ’ ಎಂದು ಅಭಿಯಾನದ ಪ್ರಮುಖ ಲೋಕೇಶ್ವರಪ್ಪ ತಿಳಿಸಿದರು. 

ಪಾದಯಾತ್ರೆಯು ಅಂಬಾಮಠದಲ್ಲಿ ಜನಸಂಪರ್ಕ ಸಭೆ, ತದನಂತರ ಸಿರಗುಪ್ಪ ಗೋರೆಬಾಳ, ಸಿಂಧನೂರು, ಜವಳಗೆರ, ಪೋಥನಾಲ್, ಹಿರೇಕೊಟ್ನೆಕಲ್, ಮಾನ್ವಿ, ರಬ್ಬಣಕಲ್-ಕಾತರಕಿ-ದದ್ದಲ್, ರಾಜಲ್ ಬಂಡಾ, ಬಿಚ್ಚಾಲೆ, ಗಿಲೇಸ್ಗೂರು ಮೂಲಕ ಜ.3ರಂದು ಮಂತ್ರಾಲಯ ತಲುಪಲಿದೆ.

ಜ.4ರಂದು ಸಂಜೆ 4 ಗಂಟೆಗೆ ಮಂತ್ರಾಲಯದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪ್ರೊ.ಎಲ್.ಕೆ.ಶ್ರೀಪತಿ, ಎಂ.ಶಂಕರ್, ಗಿರೀಶ್‌ ಪಟೇಲ್, ರಮೇಶ್ ಹೆಗ್ಡೆ, ತ್ಯಾಗರಾಜ್ ಮಿತ್ಯಾಂತ, ದಿನೇಶ್‌ ಶೇಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.