
ತ್ಯಾಗರ್ತಿ: ‘ನಿರುದ್ಯೋಗ ಸಮಸ್ಯೆ ಇದ್ದಾಗಲೂ ಯುವಕರು ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಬದುಕುವಂತೆ ಕುಟುಂಬದ ಹಿರಿಯರು ಪ್ರೇರೇಪಿಸಬೇಕು’ ಎಂದು ಧಾರವಾಡದ ಉಪನ್ಯಾಸಕ ಮಹೇಶ್ ಮಾಶಾಲ್ ಸಲಹೆ ನೀಡಿದರು.
ಆನಂದಪುರ ಸಮೀಪದ ಮುರುಘಾಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ, ಶರಣ ಸಾಹಿತ್ಯ ಸಮ್ಮೇಳನಲ್ಲಿ ಅವರು ಮಾತನಾಡಿದರು.
‘ಉನ್ನತ ಶಿಕ್ಷಣ ಪಡೆದು ನಿರುದ್ಯೋಗಿಯಾಗಿರುವ ಯುವಕರನ್ನು ಆಕರ್ಷಿಸಲು ಸೈಬರ್ ವಂಚಕರು, ದೇಶದ್ರೋಹಿಗಳು, ಭಯೋತ್ಪಾದನಾ ಸಂಘಟನೆಗಳು ಜಾಲ ಬೀಸುತ್ತಿರುತ್ತಾರೆ. ಇದರಿಂದ ಯುವಕರು ಸದಾ ಜಾಗೃತರಾಗಿದ್ದು ಬದುಕಿನಲ್ಲಿ ಉತ್ತಮ ಸಂಕಲ್ಪ ರೂಪಿಸಿಕೊಂಡು ಗುರಿ ಮುಟ್ಟುವತ್ತ ನಿರಂತರ ಪ್ರಯತ್ನ ನಡೆಸಬೇಕು’ ಎಂದರು.
‘ಭಕ್ತಿ ಮತ್ತು ಧ್ಯಾನದ ಹವ್ಯಾಸ ರೂಢಿಸಿಕೊಂಡವರ ಮನಸ್ಸು ಮತ್ತು ಹೃದಯ ನಿತ್ಯವೂ ಪರಿಶುದ್ಧವಾಗಿರುತ್ತದೆ. ಮನಸ್ಸು ಪ್ರಶಾಂತಗೊಳ್ಳುತ್ತದೆ’ ಎಂದು ಅಧ್ಯಕ್ಷತೆ ವಹಿಸಿದ್ದ ತೊಗರ್ಸಿ ಮಳೆ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
‘ಶಿವ ಶರಣರು ನಡೆ ಮತ್ತು ನುಡಿಯಲ್ಲಿ ಸರಳತೆ ರೂಢಿಸಿಕೊಂಡು ಸಮಾಜದ ಮೂಢನಂಬಿಕೆ ಮತ್ತು ಡಂಬಾಚಾರ ತೊಡೆದುಹಾಕುವ ಕಾರ್ಯದಲ್ಲಿ ಯಶಸ್ಸು ಕಂಡಿದ್ದರು’ ಎಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಧಾರವಾಡ ಜಿಲ್ಲೆ ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನಡೆಸಿದರು. ಮಠದ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ಗುತ್ತಲಕಲ್ಮಠದ ಪ್ರಭು ಸ್ವಾಮೀಜಿ, ತಾಳಗುಪ್ಪದ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಭದ್ರಾವತಿ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹರ‍್ನಹಳ್ಳಿ ಚೌಕಿ ಮಠದ ನೀಲಕಂಠ ಸ್ವಾಮೀಜಿ, ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಕುಲಸಚಿವ ಕೆ.ಸಿ.ಶಶಿಧರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಸಾಗರ ಶಾಖೆಯ ಅಧ್ಯಕ್ಷ ಗುಂಡಾಲಿ ಬಸವರಾಜ್, ಅನಿಲ್ ಬರದವಳ್ಳಿ, ಪ್ರಗತಿಪರ ಕೃಷಿಕ ಪ್ರಕಾಶ ನಾಯಕ್, ದೀಪೋತ್ಸವ ಸಮಿತಿ ಅಧ್ಯಕ್ಷ ಆಚಾಪುರ ವಿಜಯಕುಮಾರ ಗೌಡ ಮತ್ತು ಪದಾಧಿಕಾರಿಗಳು, ಡಾ.ನಾಗೇಶ, ಸುವರ್ಣಕವಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.