ADVERTISEMENT

ಟ್ರಂಪ್ ಸುಂಕ ಸಮರಕ್ಕೆ ಕೇಂದ್ರದ ಬಜೆಟ್‌ ಉತ್ತರ: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:41 IST
Last Updated 3 ಫೆಬ್ರುವರಿ 2026, 2:41 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಶಿವಮೊಗ್ಗ: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರಕ್ಕೆ ಕೇಂದ್ರದ ಬಜೆಟ್ ಉತ್ತರ ನೀಡಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ನನಸು ಮಾಡುವತ್ತ ಸಾಗಿದೆ. ಇದು ಅಭಿವೃದ್ಧಿಗೆ ಪೂರಕ ಬಜೆಟ್’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು 2047ಕ್ಕೆ ಭಾರತ ವಿಕಸಿತ ಭಾರತವಾಗುತ್ತದೆ ಎಂದು ಸಂಕಲ್ಪ ಮಾಡಿದ್ದರು. ಆ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕವಾಗಿದೆ. ಇದು ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವತ್ತ ಸಾಗಿದೆ’ ಎಂದರು.

ADVERTISEMENT

‘ಇದು ಸುಧಾರಣೆಯ ಬಜೆಟ್. ಜನಪ್ರಿಯತೆಗಿಂತ ಜನಹಿತದ ಬಜೆಟ್ ಇದಾಗಿದೆ. ಈ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಐ.ಟಿ–ಬಿ.ಟಿ, ಕೃಷಿ, ರೈಲು, ವಿಮಾನ, ರಸ್ತೆ, ಹೀಗೆ ಎಲ್ಲಾ ಆದ್ಯತಾ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಇದೊಂದು ಆರ್ಥಿಕ ಶಿಸ್ತಿನ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಹಣಕಾಸು ಕೊರತೆಯನ್ನು ಶೇ 4.4ಕ್ಕೆ ತರಲಾಗಿದೆ. ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು.

‘ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಮೂಲ ಸೌಲಭ್ಯಕ್ಕೆ ₹2 ಲಕ್ಷ ಕೋಟಿ ಹಣ ಮೀಸಲಿಟ್ಟಿತ್ತು. ಆದರೆ, ಈಗ ಎನ್‌ಡಿಎ ಸರ್ಕಾರ ಅದು ₹12.20 ಲಕ್ಷ ಕೋಟಿಗೆ ಏರಿಕೆ ಆಗಿದೆ. ಉನ್ನತ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಮಹಿಳೆಯರಿಗೆ ಉದ್ಯಮ ಆರಂಭಿಸಲು ಕೂಡ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

‘ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಾಸ್ಟೆಲ್‌ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಯುವಜನರಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಸಹಜವಾಗಿಯೇ ಭಾರತ ಅಭಿವೃದ್ಧಿಯಾಗುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಶಾಸಕರಾದ ಅಶೋಕ್‌ನಾಯ್ಕ, ಎಸ್.ರುದ್ರೇಗೌಡ್ರು, ಮಾಲತೇಶ್, ಸುಧಾಕರ್, ರಘು, ಎಸ್.ಚಂದ್ರಶೇಖರ್, ಮಂಜುನಾಥ್ ಇದ್ದರು.

ಬೆಂಗಳೂರಿನಿಂದ ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ರಾಯಚೂರು ಕಡೆಗಣಿಸಲು ಆಗೊಲ್ಲ. ಅದೇ ರೀತಿ ಹೆಚ್ಚು ತೆರಿಗೆ ಸಂಗ್ರಹದ ರಾಜ್ಯಗಳ ಜೊತೆಗೆ ಹಿಂದುಳಿದ ರಾಜ್ಯಗಳತ್ತಲೂ ಕೇಂದ್ರ ಚಿತ್ತ ಹರಿಸಬೇಕಿದೆ.
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಸಿದ್ದರಾಮಯ್ಯ ವಿಭಜಕ ಮನಸ್ಥಿತಿ ಬಿಡಲಿ..

‘ಕೇಂದ್ರ ಬಜೆಟ್‌ನಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆಯ ಅನುದಾನವನ್ನು ಶೇ 3.6ರಿಂದ 4.13ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ರಾಜ್ಯಕ್ಕೆ ಅಂದಾಜು ₹7382 ಕೋಟಿ ಅನುದಾನ ಪ್ರತೀ ವರ್ಷಕ್ಕೆ ಹೆಚ್ಚಳಗೊಳ್ಳಲಿದೆ. ಇದು ಕೇಂದ್ರ ಸರ್ಕಾರದ ಕೊಡುಗೆ ಅಲ್ಲವೇ’ ಎಂದು ಪ್ರಶ್ನಿಸಿದ ವಿಜಯೇಂದ್ರ ‘ಪ್ರತಿಯೊಂದಕ್ಕೂ ಕೇಂದ್ರದ ಮೇಲೆ ಬೊಟ್ಟು ತೋರಿಸುವ ಬದಲು ಮನವೊಲಿಸಿ ಅನುದಾನ ತರಿಸಿಕೊಳ್ಳಬೇಕು. ಒಕ್ಕೂಟ ವ್ಯವಸ್ಥೆಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆಯ ಅನುದಾನ ಹಂಚಿಕೆಯಲ್ಲಿ ಈ ಮೊದಲು ಕರ್ನಾಟಕಕ್ಕೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದರು. ಈಗ ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎನ್ನುತ್ತಿದ್ದಾರೆ. ಇದು ಅವರ ವಿಭಜಕ ಮನಸ್ಥಿತಿ. ಕೇಂದ್ರದ ವಿರುದ್ಧ ವೃಥಾ ಆರೋಪಗಳ ಮಾಡುವ ಮೂಲಕ ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.