ADVERTISEMENT

ಎನ್.ಟಿ.ಬಿ ಕಚೇರಿಯಲ್ಲಿ ಕೌಂಟರ್‌ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2025, 13:42 IST
Last Updated 30 ಮೇ 2025, 13:42 IST
ಆರ್ ವೇಣುಗೋಪಾಲ್
ಆರ್ ವೇಣುಗೋಪಾಲ್   

ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಎನ್‌ಟಿಬಿ ಶಾಖಾ ಕಚೇರಿ ಆವರಣದಲ್ಲಿ ಮೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಪುನಃ ಆರಂಭಿಸುವಂತೆ ಹಾಗೂ ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ಸರಿಪಡಿಸುವಂತೆ ಆಗ್ರಹಿಸಿ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್‌ನಿಂದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಟ್ರಸ್ಟ್ ಮುಖ್ಯಸ್ಥ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು, ‘ನಗರಸಭಾ ವ್ಯಾಪ್ತಿಯ ಜನ್ನಾಪುರ, ಎನ್.ಟಿ.ಬಿ ಕಚೇರಿ ಆವರಣದಲ್ಲಿ ಅಂದಾಜು 40 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ನಿವೃತ್ತಿಗೊಂಡ ಬಳಿಕ ಕೌಂಟರ್ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಬಹುತೇಕರು ಅನಕ್ಷರಸ್ಥರು ವಾಸವಿದ್ದು, ಅವರಿಗೆ ಮೊಬೈಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ತಿಳಿವಳಿಕೆ ಇಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

‘ನಿವಾಸಿಗಳು ವಿದ್ಯುತ್ ಬಿಲ್ ಕಟ್ಟಲು ತುಂಬಾ ದೂರ ಹೋಗಬೇಕಾಗಿದೆ. ಅವರೆಲ್ಲರೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿದ್ದು, ಅವರುಗಳಿಗೆ ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ವಿದ್ಯುತ್ ಬಿಲ್ ಕಟ್ಟಲು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕೌಂಟರ್ ಪುನಃ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.