ವಿಜಯೇಂದ್ರ
– ಪ್ರಜಾವಾಣಿ ಚಿತ್ರಗಳು
ಶಿಕಾರಿಪುರ: ನರೇಗಾ ಯೋಜನೆಗೆ ಆಮೂಲಾಗ್ರ ಬದಲಾವಣೆ ಮೂಲಕ ‘ಗ್ರಾಮರಾಜ್ಯ ರಾಮರಾಜ್ಯ’ ಮಾಡುವ ಸದಾಶಯ ಹೊಂದಿದ್ದು, ರಾಜಕೀಯಕ್ಕಾಗಿ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಬಿ-ಜಿರಾಮ್‌ಜಿ ಹೆಸರು ಮಾತ್ರ ಬದಲಾವಣೆ ಮಾಡಿಲ್ಲ. ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಸಿದೆ. ಭ್ರಷ್ಟಾಚಾರ ಹೆಚ್ಚಾಗಿದ್ದ ಯೋಜನೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚು ಹಣವನ್ನು ಯೋಜನೆಗೆ ನೀಡಿದೆ. ₹175 ಕೂಲಿಯನ್ನು ₹350ಕ್ಕೆ ಏರಿಸಿದೆ. ಯೋಜನೆ ಮೂಲಕ ಎಲ್ಲರಿಗೂ ಕೆಲಸ ಸಿಗುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ ರಾಜಕೀಯ ಕಾರಣಕ್ಕೆ ಕೇಂದ್ರದ ಹಲವು ಯೋಜನೆಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರು.
‘ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ರಾಜ್ಯಕ್ಕೆ ಬೇರೆ ಕಾಯ್ದೆ ತರುತ್ತೇವೆ ಎಂದ ಕಾಂಗ್ರೆಸ್, ಎರಡು ವರ್ಷವಾದರೂ ಕಾಯ್ದೆ ಜಾರಿಗೊಳಿಸಿಲ್ಲ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸುವ ಪ್ರಯತ್ನ ಫಲಿಸದಿದ್ದಾಗ ರಾಜ್ಯಪಾಲರಿಗೆ ಅಗೌರವ ತೋರಿಸುವ ಕೆಟ್ಟ ಕೆಲಸ ಮಾಡಿದೆ. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುವ ಬದಲು ಯೋಜನೆ ವಿರೋಧಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದು ಸರಿಯಲ್ಲ. ಗ್ರಾ.ಪಂ. ಸಭೆಯಲ್ಲಿ ಯೋಜನೆ ವಿರೋಧಿಸುವ ಕೆಲಸ ನಡೆಯುತ್ತಿದ್ದು ಅದಕ್ಕೆ ಪ್ರತಿಯೋಗಿ ಬಿಜೆಪಿ ಗ್ರಾಮಗಳಿಗೆ ತೆರಳಿ ಯೋಜನೆ ಅನುಕೂಲ ಜನತೆಗೆ ತಿಳಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಮಹೇಶ್ ಹುಲ್ಮಾರ್, ಗುರುರಾಜ್ ಜಗತಾಪ್, ಅಶೋಕ್ ಮಾರವಳ್ಳಿ, ಗಿರೀಶ್ ಧಾರವಾಡ ಇದ್ದರು.