ADVERTISEMENT

ಮಠಗಳಿಂದ ಸುಸ್ಥಿರ ಸಮಾಜ ಕಟ್ಟುವ ಕೆಲಸ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:59 IST
Last Updated 4 ಫೆಬ್ರುವರಿ 2026, 3:59 IST
ಶಿಕಾರಿಪುರದಲ್ಲಿ ಮಂಗಳವಾರ ನಡೆದ ವೀರಶೈವ ಜಂಗಮ ಸಾಂಸ್ಕೃತಿಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಶಿ, ಉಜ್ಜೈನಿ ಸ್ವಾಮೀಜಿಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು 
ಶಿಕಾರಿಪುರದಲ್ಲಿ ಮಂಗಳವಾರ ನಡೆದ ವೀರಶೈವ ಜಂಗಮ ಸಾಂಸ್ಕೃತಿಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಶಿ, ಉಜ್ಜೈನಿ ಸ್ವಾಮೀಜಿಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು    

ಶಿಕಾರಿಪುರ: ‘ಧರ್ಮ ಕಾರ್ಯದ ಜತೆ ಶಿಕ್ಷಣದ ದಾಸೋಹ ನಡೆಸುವ ಮೂಲಕ ಸುಸ್ಥಿರ ಸಮಾಜ ಕಟ್ಟುವ ಕೆಲಸದಲ್ಲಿ ವೀರಶೈವ ಮಠಗಳು ಸ್ಮರಣೀಯ ಕಾರ್ಯ ನಡೆಸುತ್ತಿವೆ’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಜನಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ವೀರಶೈವ ಜಂಗಮ ಸಾಂಸ್ಕೃತಿ ಸಮುದಾಯ ಭವನ ಉದ್ಘಾಟನೆ, ಕಾಶಿ, ಉಜ್ಜೈನಿ ಸ್ವಾಮೀಜಿಗಳ ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೀರಶೈವ ಧರ್ಮದ ಪಂಚ ಪೀಠಗಳು ಐತಿಹಾಸಿಕ ಪರಂಪರೆ ಹೊಂದಿದ್ದು, ಅವುಗಳು ನಾಡಿನ ಹಲವೆಡೆ ತಮ್ಮ ಶಾಖಾ ಮಠ ಸ್ಥಾಪಿಸಿ ಜನಹಿತ ಕೆಲಸದಲ್ಲಿ ನಿರತವಾಗಿವೆ. ಇಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಮದುವೆ– ಮುಂಜಿಗೆ ಬಳಸದೆ ವೈದಿಕ ಸಂಸ್ಕಾರ, ವೇದಘೋಷ ಕಲಿಯುವ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಿ’ ಎಂದು ಹೇಳಿದರು.

ADVERTISEMENT

‘ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಠಗಳು ತೊಡಗಿಸಿಕೊಂಡಿವೆ. ಅವುಗಳು ನೀಡುವ ಜ್ಞಾನವು ಸಮಾಜ ಸರಿದಾರಿಯಲ್ಲಿ ನಡೆಯಲು, ಜನರ ಬದುಕು ಹಸನಾಗಲು ಕಾರಣವಾಗಿವೆ. ವೀರಶೈವ ಮಠಗಳು ಎಲ್ಲ ಧರ್ಮದ ಜನರಿಗೆ ಸಂಸ್ಕಾರ ನೀಡುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಯಾವುದೇ ಅನುದಾನ ಇಲ್ಲದೆ ಸಮಾಜ ಕಟ್ಟುವ ಕೆಲಸ ನಿರಂತರವಾಗಿ ಮಠಗಳಿಂದ ಆಗುತ್ತಿದೆ. ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೂ ಸ್ವಾಮೀಜಿಗಳು ಮುಂದಾಗುತ್ತಿದ್ದಾರೆ. ಅದಕ್ಕಾಗಿ ಭಕ್ತರೆಲ್ಲರೂ ಪರಂಪರೆ ಉಳಿಸುವ ಕೆಲಸಕ್ಕೆ ಕೈಜೋಡಿಸಬೇಕು’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಉಜ್ಜೈನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ತಾಲ್ಲೂಕಿನ ಎಲ್ಲ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಜಂಗಮ ಸಮಾಜ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಜಿ.ರುದ್ರಪ್ಪಯ್ಯ, ಎಸ್.ಪಟ್ಟದಸ್ವಾಮಿ, ಕೆ.ಬಿ.ಪ್ರಭುಸ್ವಾಮಿ, ಪಿ.ಜಯದೇವಯ್ಯ, ಕೆ.ಜಿ.ಭೋಜರಾಜ ಪಾಟೀಲ್, ಕುಮಾರಸ್ವಾಮಿ ಹಿರೇಮಠ, ಎಚ್.ಎಂ.ವಿಜಯಕುಮಾರ್, ಎಸ್.ಎಚ್.ದಾನಯ್ಯ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.