ADVERTISEMENT

ಖಾದ್ಯ ಮೇಳದಿಂದ ಗ್ರಾಮ ಸ್ವರಾಜ್ಯ ಕನಸು ಸಾಕಾರ: ಡಿ.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:45 IST
Last Updated 6 ಡಿಸೆಂಬರ್ 2021, 5:45 IST
ಶಿವಮೊಗ್ಗ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಖಾದ್ಯ ಮೇಳ’ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ವಿವಿಧ ಖಾದ್ಯಗಳನ್ನು ಸವಿದರು.
ಶಿವಮೊಗ್ಗ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಖಾದ್ಯ ಮೇಳ’ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ವಿವಿಧ ಖಾದ್ಯಗಳನ್ನು ಸವಿದರು.   

ಶಿವಮೊಗ್ಗ: ಎಲ್ಲರೂ ಸ್ವಾವಲಂಬಿಗಳಾಗಬೇಕು ಎಂಬುದು ಗಾಂಧೀಜಿ ಕನಸಾಗಿತ್ತು. ಅದನ್ನು ಈ ರೀತಿಯ ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತರುತ್ತಿರುವುದು ಅನುಕರಣೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಇಲ್ಲಿನ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯಿಂದ
ಭಾನುವಾರ ಹಮ್ಮಿಕೊಂಡಿದ್ದ ‘ಖಾದ್ಯ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕಸನು ಇಂತಹ ಕಾರ್ಯಕ್ರಮಗಳ ಮೂಲಕ ಸಾಕಾರಗೊಳಿಸುತ್ತಿದೆ. ಗೃಹ ಬಳಕೆ ವಸ್ತು, ಕರಕುಶಲ ವಸ್ತು, ವಿವಿಧ ವಿನ್ಯಾಸದ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದು, ಇದರ ಮೂಲಕ ಜೀವನ ಸ್ವಾವಲಂಬಿಯಾಗುತ್ತದೆ’ ಎಂದರು.

ADVERTISEMENT

‘ಕೋವಿಡ್ ಸವಾಲುಗಳ ನಡುವೆ ಇಂತಹ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು ಉತ್ತಮ ಕೆಲಸ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಜೊತೆಗೆ, ತರಹೇವಾರಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸಮಾಜದಲ್ಲಿ ಲವಲವಿಕೆ ತರಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಪರಿಷತ್‌ ರಾಜ್ಯಕ್ಕೆ ಮಾದರಿ ಆಗಲಿದೆ: ‘ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳು ನಿರ್ಮಾಣವಾದರೆ ಸಾಲದು. ಅದರೊಂದಿಗೆ ಭಾಷೆ, ಸಂಸ್ಕೃತಿ ಕೂಡ ಬೆಳೆಯಬೇಕು. ಆಗ ಮಾತ್ರ ಅದು ಸರ್ವತೋಮುಖ ಅಭಿವೃದ್ಧಿ ಅನಿಸಿಕೊಳ್ಳುತ್ತದೆ. ಕನ್ನಡ ಸಾರಸ್ವತ ಲೋಕಕ್ಕಾಗಿ ಶ್ರಮಿಸಲು ನೀಡಿರುವ ಅವಕಾಶವನ್ನು ಬಳಸಿಕೊಂಡು ರಾಜ್ಯಕ್ಕೆ ಮಾದರಿಯಾಗಬಲ್ಲ ಪರಿಷತ್ತನ್ನು ಕಟ್ಟಲಾಗುವುದು’ ಎಂದು ಭರವಸೆ ನೀಡಿದರು.

ಪ್ರಮುಖರಾದ ಭಾರತಿ ರಾಮಕೃಷ್ಣ, ಡಾ.ಮೋಹನ್ ಚಂದ್ರಗುತ್ತಿ, ಶ್ರೀಕಾಂತ್, ಬಿ.ಎ. ರಮೇಶ್ ಹೆಗ್ಡೆ, ಡಾ.ನೇತ್ರಾ ಗೌಡ, ಅಂಜು ಸುರೇಶ್, ಚೇತನ್, ಮಮತಾ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.