ADVERTISEMENT

ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವದ ಕೊಲೆ: ಸಚಿವ ಮಧು ಬಂಗಾರಪ್ಪ

ಮತಗಳ್ಳರೇ ಗದ್ದುಗೆ ಬಿಡಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:49 IST
Last Updated 23 ಸೆಪ್ಟೆಂಬರ್ 2025, 4:49 IST
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಸೋಮವಾರ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಸೋಮವಾರ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು   

ಶಿವಮೊಗ್ಗ: ಮತಗಳವು ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಮತಗಳ್ಳರೇ ಗದ್ದುಗೆ ಬಿಡಿ’ ‍(ವೋಟ್ ಚೋರ್ ಗದ್ದಿ ಚೋಡ್) ಅಭಿಯಾನಕ್ಕೆ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಎದುರು ಬೃಹತ್ ಬ್ಯಾನರ್‌ಗೆ ಸಹಿ ಹಾಕುವ ಮೂಲಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ, ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಕೊಲೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಾರ್ವಜನಿಕರಲ್ಲಿ ಕಾಂಗ್ರೆಸ್ ಅರಿವು ಮೂಡಿಸಲಿದೆ ಎಂದರು. 

‘ಇಡೀ ಭಾರತವನ್ನು ಒಗ್ಗೂಡಿಸಲು ಎಐಸಿಸಿ ನಾಯಕ ರಾಹುಲ್‌ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಮಾಡಿದ್ದರು. ಈಗ ಮತಗಳ್ಳತನದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಕಾಂಗ್ರೆಸ್ ಯಾವತ್ತೂ ಜನಸಾಮಾನ್ಯರ ಪಕ್ಷವಾಗಿದ್ದು, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಾ ಬಂದಿದೆ. ಆದರೆ ಬಿಜೆಪಿ ಜಾತಿ– ಧರ್ಮಗಳ ಹೆಸರಲ್ಲಿ ದೇಶವನ್ನು ಒಡೆಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಮಹಾದೇವಪುರ ಕ್ಷೇತ್ರವೊಂದರಲ್ಲೇ 1 ಲಕ್ಷ ಮತಗಳು ಮಾಯವಾಗಿದ್ದು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಆರು ಸಾವಿರ ಮತಗಳು ಕಾಣೆಯಾಗಿದ್ದು, ಇವೆಲ್ಲವೂ ಬಿಜೆಪಿಯವರ ಮತಗಳ್ಳತನಕ್ಕೆ ಸ್ಪಷ್ಟ ಸಾಕ್ಷಿ ಎಂದರು. 

ಆಧಾರ್ ಕಾರ್ಡ್, ಜಿಎಸ್‌ಟಿ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿದಾಗ ಅವುಗಳ ವಿರುದ್ಧ ಬಿಜೆಪಿ ಅಪ್ರಚಾರ ಮಾಡಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿ ಅವೇ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಎಚ್‌.ಎಂ.ಚಂದ್ರಶೇಖರಪ್ಪ, ಸುಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ, ಮುಖಂಡರಾದ ಕಲಗೋಡು ರತ್ನಾಕರ, ಎಚ್‌.ಸಿ.ಯೋಗೀಶ್, ರಮೇಶ್ ಶಂಕರಘಟ್ಟ, ಜಿ.ಡಿ.ಮಂಜುನಾಥ, ಎಸ್.ಕೆ.ಮರಿಯಪ್ಪ, ಶರತ್ ಮರಿಯಪ್ಪ, ರಮೇಶ ಹೆಗ್ಡೆ, ಹರ್ಷಿತ್ ಗೌಡ, ಇಕ್ಕೇರಿ ರಮೇಶ್, ಪಿ.ಒ.ಶಿವಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಾಧ್ಯಮ ಕ್ಷೇತ್ರ ಕೆಲವೇ ವ್ಯಕ್ತಿಗಳ ಕೈಯಲ್ಲಿದೆ. ಹೀಗಾಗಿ ಶೇ 80ರಷ್ಟು ಮಾಧ್ಯಮಗಳು ಕೇಂದ್ರ ಸರ್ಕಾರದ ವಿರುದ್ಧ ಸುದ್ದಿ ಮಾಡುವುದಿಲ್ಲ. ಸರ್ಕಾರದ ವಿರುದ್ಧ ಬರೆಯುವವರನ್ನು ಹತ್ತಿಕ್ಕಿ ಜನರ ಹಕ್ಕು ಕಸಿದುಕೊಳ್ಳಲಾಗುತ್ತಿದೆ
– ಮಂಜುನಾಥ ಭಂಡಾರಿ, ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.