ಶಿಕಾರಿಪುರ ತಾಲ್ಲೂಕು ಕೊರಟಿಕೆರೆ ತಾಂಡ ಸರ್ಕಾರಿ ಕಿರಿಯ ಶಾಲೆ
ಶಿಕಾರಿಪುರ: ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ಪರಿಣಾಮ ಒಂದೂವರೆ ವರ್ಷದಿಂದ ಶಾಲೆಗೆ ನೀರು ಪೂರೈಕೆ ಇಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ನಿತ್ಯ ಗೋಳು ಅನುಭವಿಸುವ ಸ್ಥಿತಿ ತಾಲ್ಲೂಕಿನ ಕೊರಟಿಕೆರೆ ತಾಂಡಾದಲ್ಲಿ ನಿರ್ಮಾಣವಾಗಿದೆ.
ಕೊರಟಿಕೆರೆ ಬಂಜಾರ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಕುಡಿಯಲು, ಬಿಸಿಯೂಟ ತಯಾರಿಸಲು, ಶೌಚಾಲಯದಲ್ಲಿ ಬಳಸಲು ನೀರಿಲ್ಲದೆ ಸಮಸ್ಯೆ ಎದುರಾಗಿದೆ. ಅದನ್ನು ಸರಿಪಡಿಸಬೇಕು ಎಂದು ಹಲವು ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ.
ನೀರಿಗೆ ಸಂಕಷ್ಟ:
ಕೊರಟಿಕೆರೆ ತಾಂಡಾದಲ್ಲಿ ‘ಮನೆ ಮನೆ ಗಂಗೆ’ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಈ ಹಿಂದೆ ಇದ್ದ ಬೋರ್‌ವೆಲ್ ಸಂಪರ್ಕದ ಪೈಪ್‌ಲೈನ್ ಕಟ್ ಮಾಡಿದ್ದು, ಹೊಸದಾಗಿ ಅದಕ್ಕೆ ಜೋಡಿಸಿಲ್ಲ. ಬದಲಿಗೆ ಶಾಲೆಗೆ ಒಂದು ನಲ್ಲಿ ಸಂಪರ್ಕ ನೀಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ 9ರವರೆಗೆ ಮಾತ್ರ ಅದರಲ್ಲಿ ನೀರು ಬರುತ್ತದೆ. ಆಗ ಅಡುಗೆ ಸಿಬ್ಬಂದಿ ಬಿಸಿಯೂಟಕ್ಕೆ ಅಗತ್ಯವಿರುವ ನೀರು ಸಂಗ್ರಹಿಸುತ್ತಾರೆ. ಇನ್ನುಳಿದ ಅಲ್ಪ ಸ್ವಲ್ಪ ನೀರು ವಿದ್ಯಾರ್ಥಿಗಳ ಬಳಕೆಗೆ ಬರುತ್ತದೆ.
ನೀರು ಬಾರದ ದಿನಗಳಲ್ಲಿ ಅಕ್ಕಪಕ್ಕದ ಮನೆಯಿಂದ ನೀರು ತಂದು ಅಡುಗೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಮನೆಯಿಂದ ಬಾಟಲಿ ನೀರು ತರುತ್ತಾರೆ. ಶಾಲೆಯಲ್ಲಿ ಮುಖ್ಯಶಿಕ್ಷಕ, ಸಹಶಿಕ್ಷಕಿ, ಬಿಸಿಯೂಟ ಸಿಬ್ಬಂದಿ ಇದ್ದು, ಅವರು ಬಕೆಟ್ ಹಿಡಿದುಕೊಂಡು ಶೌಚಾಲಯಕ್ಕೆ ತೆರಳುವ ಸ್ಥಿತಿ ಇದೆ. ವಿದ್ಯಾರ್ಥಿಗಳು ಬಯಲು ಶೌಚಾಲಯದ ಮೊರೆ ಹೋಗಿದ್ದಾರೆ.
ನಿರ್ಲಕ್ಷ್ಯ:
ಕೊರಟಿಕೆರೆ ತಾಂಡಾದಲ್ಲಿ, ರಾಗಿಕೊಪ್ಪ ರಸ್ತೆಯಲ್ಲಿ, ಮುಳುಕೊಪ್ಪ ರಸ್ತೆ ಈ ಮೂರು ಕಡೆ ಬೋರ್‌ವೆಲ್‌ಗಳಿವೆ. ಅವು ಸುಸ್ಥಿತಿಯಲ್ಲಿದ್ದರೂ ಈಗ ಬಳಕೆಯಲ್ಲಿಲ್ಲ. ಅವುಗಳ ಮೂಲಕ ಶಾಲೆಗೆ ಪೈಪ್‌ಲೈನ್ ಅಳವಡಿಸಿದರೆ ನೀರಿನ ಸೌಲಭ್ಯ ಕಲ್ಪಿಸಬಹುದು. ಈ ಕುರಿತು ಶಾಲಾಭಿವೃದ್ಧಿ ಸಮಿತಿ ಮೂರು ಬಾರಿ ಪಿಡಿಒರನ್ನು ಶಾಲೆಗೆ ಕರೆಯಿಸಿ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಇದಲ್ಲದೇ ಶಾಲೆಯ ಜಾಗ ಗುರುತಿಸಿ ಕಂದಕ ತೆಗೆಸಿದ್ದು, ಅಲ್ಲಿಗೆ ಕಾಂಪೌಂಡ್ ನಿರ್ಮಾಣಕ್ಕೆ ಕಳೆದ ವರ್ಷ ₹ 5 ಲಕ್ಷ ಅನುದಾನ ಬಂದಿದ್ದು, ಕಾಮಗಾರಿ ಕೈಗೊಳ್ಳದ ಕಾರಣ ಹಣ ವಾಸಪ್ ಹೋಗಿದೆ ಎಂದೂ ಅವರು ಹೇಳಿದರು.
‘ಮನೆ ಮನೆ ಗಂಗೆ’ ಯೋಜನೆಯನ್ನು ತಲುಪಿಸುವ ಭರದಲ್ಲಿ ಶಾಲೆಗಿದ್ದ ಬೋರ್‌ವೆಲ್ ಸಂಪರ್ಕ ಕಟ್ ಮಾಡಲಾಗಿದೆ. ಶಾಲೆ ತೊಟ್ಟಿ ಸಿಂಟೆಕ್ಸ್‌ಗೆ ಪೈಪ್‌ಲೈನ್ ಅಳವಡಿಸಬೇಕು. ಶಾಲೆಯ ಸುತ್ತಲೂ ಕಂಪೌಂಡ್ ನಿರ್ಮಿಸಿ ಸಸಿ ನೆಡಬೇಕು. ಈ ಬಗ್ಗೆ ಪಿಡಿಒ ನಿರ್ಲಕ್ಷ್ಯ ಮಾಡಿದರೆ ಗಂಭೀರವಾಗಿ ಪರಿಗಣಿಸಬೇಕು.ನಾಗರಾಜ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಸದಸ್ಯ
ಶಾಲೆ ಸಮಸ್ಯೆ ಕುರಿತು ಗ್ರಾಮಸ್ಥರು ಶಾಲೆ ಮುಖ್ಯಶಿಕ್ಷಕರು ಗಮನಕ್ಕೆ ತಂದಿದ್ದು ಸ್ಥಳ ಪರಿಶೀಲನೆ ಮಾಡಲು ಪಿಡಿಒಗೆ ಸೂಚಿಸಿದ್ದೇನೆ. ನೀರಿನ ಸಮಸ್ಯೆ ಕೂಡಲೇ ಪರಿಹರಿಸಲಾಗುವುದು.ನಾಗರಾಜ್, ಎನ್.ಜಿ ಇ.ಒ, ತಾಲ್ಲೂಕು ಪಂಚಾಯಿತಿ ಶಿಕಾರಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.