
ಸೊರಬ: ಕಳೆದ ವಾರದಿಂದ ತಾಲ್ಲೂಕಿನ ಉಳವಿ ಹಾಗೂ ಇಂಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ಭಾಗದಲ್ಲಿ ಆತಂಕ ಸೃಷ್ಟಿಸಿದ ಕಾಡಾನೆಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆ ಕುಮ್ಕಿ ಅನೆಗಳನ್ನು ಕರೆಸಿ ಖೆಡ್ಡಾ ತೋಡಿದೆ.
ಕಳೆದ ವಾರದಿಂದ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡನೆಗಳ ಹೆಜ್ಜೆ ಗುರುತು ಹಾಗೂ ಲದ್ದಿಯನ್ನು ಗೊತ್ತು ಮಾಡಲಾಗಿತ್ತು. ಆದರೆ, ಕಾಡಾನೆಗಳ ಸುಳಿವು ಸಿಕ್ಕಿರಲಿಲ್ಲ. ಈ ಭಾಗದ ಉಳವಿ, ಕಾನಳ್ಳಿ, ಕಣ್ಣೂರು, ಮೈಸಾವಿ ಭಾಗದಲ್ಲಿ ಸಂಚರಿಸಿದ ಆನೆಗಳು ನಂತರ ಇಂಡುವಳ್ಳಿ, ಬರಗಿ ಭಾಗದ ಗದ್ದೆ–ತೋಟಗಳಲ್ಲಿ ಅಪಾರ ಹಾನಿ ಮಾಡಿದ್ದವು. ಹಾಗಾಗಿ ಕಾಡಾನೆಗಳ ಕಾರ್ಯಾಚರಣೆಗೆ ಸಕ್ರೆಬೈಲಿನಿಂದ ನಾಲ್ಕು ಆನೆಗಳನ್ನು ಕರೆತರಲಾಗಿದೆ. ಸಕ್ರೇಬೈಲಿನ ಭೀಮ, ಅರ್ಜುನ, ಭೀಷ್ಮ ಹಾಗೂ ಅಶ್ವತ್ಥಾಮ ಹೆಸರಿನ ಆನೆಗಳು ಕಾರ್ಯಾಚರಣೆಗಾಗಿ ಲಿಂಗದಹಳ್ಳಿ ಭಾಗಕ್ಕೆ ಆಗಮಿಸಿವೆ.
ಬರಗಿಯಲ್ಲಿ ಬೀಡು ಬಿಟ್ಟಿರುವ ಜೋಡಿ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ಅರಣ್ಯ ಇಲಾಖೆಯ ಪ್ರಯತ್ನ ವಿಫಲವಾಗಿತ್ತು. ಹೀಗಾಗಿ ಕಾರ್ಯಾಚರಣೆಗೆ ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳನ್ನು ಲಾರಿ ಮೂಲಕ ಲಿಂಗದಹಳ್ಳಿ ಬಳಿಗೆ ಕರೆದುಕೊಂಡು ಬರಲಾಗಿದೆ. ಇಲ್ಲಿಂದ ಕಾಡಾನೆಗಳು ಇರುವಂತಹ ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ. ನಾಲ್ಕು ಕುಮ್ಮಿ ಆನೆಗಳನ್ನು ಬಳಸಿ ಬರಗಿಯಲ್ಲಿ ಬೀಡು ಬಿಟ್ಟಿರುವಂತ ಜೋಡಿ ಕಾಡಾನೆಗಳನ್ನು ಬಂದ ಕಡೆಗೆ ಓಡಿಸಲಾಗುವುದು ಎನ್ನುತ್ತಾರೆ ಡಿಎಫ್‌ಒ ಮೋಹನ್ ಕುಮಾರ್.
ಶಿಕಾರಿಪುರ ಎಸಿಎಫ್ ರವೀಂದ್ರ, ಸೊರಬ ಎಸಿಎಫ್ ಸುರೇಶ್ ಕಳ್ಳಳ್ಳಿ, ಸಾಗರ ಆರ್‌ಎಫ್‌ಓ ಅಣ್ಣಪ್ಪ ಬಿ, ಸೊರಬ ಆರ್‌ಎಫ್‌ಒ ಶ್ರೀಪಾದ್ ನಾಯ್ಕ್, ಆನೆ ಕಾರ್ಯಪಡೆ ಡಿಆರ್‌ಎಫ್‌ಒ ಸುನೀಲ್ ಮತ್ತು ತಂಡ, ಹೊಳೆಕೊಪ್ಪ ಡಿಆರ್‌ಎಫ್‌ಒ. ಮುತ್ತಣ್ಣ, ಕೆಳದಿ ಡಿಆರ್‌ಎಫ್‌ಒ ವಿಜಯ್ ಕುಮಾರ್, ಉಳವಿ ಡಿಆರ್‌ಎಫ್‌ಒ ಯೋಗೇಶ್, ಉಳವಿ ಅರಣ್ಯ ಗಸ್ತು ಪಾಲಕ ಪ್ರವೀಣ್ ಕುಮಾರ್, ಸಕ್ರೆಬೈಲಿನ ನಾಲ್ವರು ಮಾವುತರು ಸೇರಿದಂತೆ 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.