ADVERTISEMENT

‘ತಂತ್ರಜ್ಞಾನದ ಯುಗದಲ್ಲಿ ಮಹಿಳೆಯ ಶೋಷಣೆ ಹೆಚ್ಚು’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 13:06 IST
Last Updated 8 ಮಾರ್ಚ್ 2020, 13:06 IST
ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಲೇಖಕಿ ನೇತ್ರಾವತಿ ಚಂದ್ರಹಾಸ ಅವರ ‘ಪುಟ್ಟ ಪುಟ್ಟ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು
ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೇಕೇರಿಯಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಲೇಖಕಿ ನೇತ್ರಾವತಿ ಚಂದ್ರಹಾಸ ಅವರ ‘ಪುಟ್ಟ ಪುಟ್ಟ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು   

ತೀರ್ಥಹಳ್ಳಿ: ‘ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾಳೆ. ನಮ್ಮ ಬದುಕಿನ ಉನ್ನತಿಗೆ ಪೂರಕವಾಗಬೇಕಿದ್ದ ತಂತ್ರಜ್ಞಾನ ದುರುಪಯೋಗವಾಗಬಾರದು’ ಎಂದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಟಿ. ಪಾರ್ವತಮ್ಮ ಅಭಿಪ್ರಾಯಪಟ್ಟರು.

ಭಾನುವಾರ ತಾಲ್ಲೂಕಿನ ಗುಡ್ಡೇಕೇರಿಯಲ್ಲಿ ತಾಲ್ಲೂಕು ಲೇಖಕಿಯರ ಸಂಘ, ಸ್ತ್ರೀ ಶಕ್ತಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಲೇಖಕಿ ನೇತ್ರಾವತಿ ಚಂದ್ರಹಾಸ ಅವರ 'ಪುಟ್ಟ ಪುಟ್ಟ ಹೆಜ್ಜೆಗಳು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆ ಕೀಳರಿಮೆಯಿಂದ ಹೊರಬರಬೇಕು. ಹೆಣ್ಣು ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಿದರೆ ಆಕೆ ಸಾಧನೆ ಮಾಡಬಲ್ಲಳು. ಮಹಿಳೆಯರು ಸಮಾಜದಲ್ಲಿನ ತಾರತಮ್ಯವನ್ನು ಮೀರಿ ಬೆಳೆದು ನಿಲ್ಲಬೇಕು. ಮಹಿಳೆಯರ ಪ್ರಾಮುಖ್ಯತೆಯನ್ನು ಸಮಾಜ ಮರೆಯಬಾರದು. ಸಂಘಟಿತರಾದ ಮಹಿಳೆಯರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ADVERTISEMENT

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಚಂದ್ರಕಲಾ, ‘ಕೌಟುಂಬಿಕ ಒತ್ತಡಗಳ ನಡುವೆ ಮಹಿಳೆ ಇಂದು ಸಾಮಾಜಿಕವಾಗಿ ಗುರುತಿಸಿಕೊಂಡು ಸಾಧನೆ ಮಾಡುತ್ತಿದ್ದಾಳೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಇಂದು ಪುರುಷರಿಗೆ ಸರಿಸಮನಾಗಿ ಗುರುತಾಗಿದ್ದಾಳೆ’ ಎಂದರು.

ಲೇಖಕಿ ನೇತ್ರಾವತಿ ಅವರ 'ಪುಟ್ಟ ಪುಟ್ಟ ಹೆಜ್ಜೆಗಳು' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ‘ಸಮಾಜದಲ್ಲಿ ಮಹಿಳೆಯರು ನಿರ್ವಹಿಸುವ ಪಾತ್ರ ದೊಡ್ಡದು. ಬದುಕಿನ ಎಲ್ಲಾ ಆಯಾಮಗಳಲ್ಲೂ ಮಹಿಳೆಗೆ ಆದ್ಯತೆ ಸಿಗಬೇಕು. ಜಿಲ್ಲೆಯ ಕೊಡಚಾದ್ರಿ ಮಹಿಳಾ ಟ್ರಸ್ಟ್ ಸಾಧನೆ ರಾಜ್ಯದಲ್ಲಿ ಮಹತ್ವದ್ದಾಗಿದೆ’ಎಂದರು.

ತಾಲ್ಲೂಕು ಲೇಖಕಿಯರ ಸಂಘದ ಅಧ್ಯಕ್ಷೆ ನೇತ್ರಾವತಿ ಚಂದ್ರಹಾಸಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಡಾ. ಹಸೀನಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಿ ಬಾಳೇಹಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ವೀಣಾ ಗಿರೀಶ್, ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸಿರುಮನೆ ನಂದನ್ ಇದ್ದರು.

ಗ್ರಾಮೀಣ ಮಹಿಳಾ ಸಾಧಕಿಯರಾದ ಸುಚರಿತಾ, ಜಮುನಾ, ಅನಸೂಯ, ಶಾರದಮ್ಮ, ಜಾನಕಿ, ಪುಷ್ಕರಣಿಯಮ್ಮ, ಜಯಂತಿ ಅವರನ್ನು ಸನ್ಮಾನಿಸಲಾಯಿತು.
ಸುರೇಖಾ ಸ್ವಾಗತಿಸಿದರು. ಜಯಂತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.