ಮಸೀದಿಯ ಹೊರ ಆವರಣದಲ್ಲಿ ಚಾವಣಿ ನಿರ್ಮಿಸಿರುವುದು
ಕಾರ್ಗಲ್: ಜೋಗ ಜಲಪಾತದ ಸಮೀಪದಲ್ಲಿರುವ ಜುಮ್ಮಾ ಮಸೀದಿಯ ಹೊರ ಆವರಣದ ಮೇಲ್ಚಾವಣಿ ನಿರ್ಮಿಸಲು ಇಲ್ಲಿನ ಮುಸ್ಲಿಂ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಅಡಿ ಸರ್ಕಾರ ತಮ್ಮ ಖಾತೆಗೆ ಹಾಕಿದ್ದ 1 ತಿಂಗಳ ಹಣವನ್ನು ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ.
ಈ ಹಿಂದೆ ಮಸೀದಿಯ ಹೊರ ಆವರಣದಲ್ಲಿ ಯಾವುದೇ ಕಾರ್ಯಕ್ರಮ ಸಂಘಟಿಸುವಾಗ ಶಾಮಿಯಾನ ಹಾಕಲಾಗುತ್ತಿತ್ತು. ಒಮ್ಮೆ ಈದ್ ಮಿಲಾದ್ ಕಾರ್ಯಕ್ರಮ ನಡೆಸುವಾಗ ಜೋರು ಮಳೆ ಸುರಿದು ಶಾಮಿಯಾನ ಸೋರಿಕೆಯಿಂದ ಧಾರ್ಮಿಕ ಕಾರ್ಯಕ್ಕೆ ತೊಂದರೆ ಆಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ತೀರ್ಮಾನಿಸಿದ್ದ ಮಹಿಳಾ ಸಮೂಹ, ಸರ್ಕಾರದ ಗೃಹಲಕ್ಷ್ಮೀ ಹಣ ಬಿಡುಗಡೆಯಾದಾಗ ಎಲ್ಲರೂ ಒಂದಾಗಿ ಮಸೀದಿಯ ಹೊರ ಚಾವಣಿ ನಿರ್ಮಾಣದ ಸಂಕಲ್ಪಕ್ಕೆ ಸಹಾಯ ಹಸ್ತ ನೀಡಲು ಮುಂದಾದರು.
ಒಟ್ಟು 75 ಮುಸ್ಲಿಂ ಕುಟುಂಬದ ಮಹಿಳೆಯರು ರಂಜಾನ್ ಮಾಸದಲ್ಲಿ ಸರ್ಕಾರದಿಂದ ದೊರೆತ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತಲಾ ₹ 2 ಸಾವಿರ ಒಟ್ಟುಗೂಡಿಸಿ ₹ 1.50ಲಕ್ಷ ಸಂಗ್ರಹ ಮಾಡಿ ಜುಮ್ಮಾ ಮಸೀದಿಯ ಆಡಳಿತ ಮಂಡಳಿಗೆ ಕೊಟ್ಟಿದ್ದಾರೆ. ಮಸೀದಿಯ ಹೊರ ಆವರಣದ ಮೇಲ್ಚಾವಣಿಯ ಕೆಲಸ ಆರಂಭಿಸಲು ವಿನಂತಿಸಿದ್ದಾರೆ. ಆ ಹಣ ಸಾಕಾಗದಿದ್ದರೆ ಇನ್ನಷ್ಟು ಸಹಾಯ ಮಾಡುವ ಭರವಸೆ ಕೊಟ್ಟಿದ್ದಾರೆ. ಅವರ ನೆರವಿನ ಹಣ ಬಳಸಿ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಮಹಿಳೆಯರ ಈ ಕಾರ್ಯದ ಜೊತೆ ಬೇರೆ ದಾನಿಗಳು, ಉದ್ಯಮಿಗಳು ಮಸೀದಿಯ ಹೊರಛಾವಣಿಯ ಕೆಲಸಕ್ಕೆ ಸಹಾಯ ಹಸ್ತ ಚಾಚಿ ಕೆಲಸ ಪೂರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.