
ಶಿವಮೊಗ್ಗ: ಜೀವದಾಯಿ ಪುಟ್ಟ ಹೃದಯದ ಬಗ್ಗೆ ತುಸುವಾದರೂ ಕಾಳಜಿ ವಹಿಸಿ, ಅದನ್ನು ಸದಾ ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಎಂಬ ಆಶಯದೊಂದಿಗೆ ಇಲ್ಲಿನ ಸಾಗರ ರಸ್ತೆಯ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ವಿಶ್ವ ಹೃದಯ ದಿನವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
‘ಆರ್ಟ್ ಫಾರ್ ಹಾರ್ಟ್’ ಮೂಲಮಂತ್ರ ಇಡೀ ಕಾರ್ಯಕ್ರಮದ ಒತ್ತಾಸೆಯಾಗಿತ್ತು. ಶಿವಮೊಗ್ಗದ 25ಕ್ಕೂ ಹೆಚ್ಚು ಶಾಲೆಗಳ 200 ಮಕ್ಕಳು ಈ ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾದರು. ಮಕ್ಕಳಿಗೆ ಮತ್ತು ಅವರೊಂದಿಗೆ ಬಂದಿದ್ದ ಪಾಲಕರಿಗೆ ಮಾನವ ಹೃದಯದ ರಚನೆ ಮತ್ತು ಅದರ ಕಾರ್ಯವೈಖರಿ ಬಗ್ಗೆ ಹೃದ್ರೋಗ ತಜ್ಞ ಡಾ.ನರೇಂದ್ರ ನಿಶಾನಿಮಠ ವಿವರಣೆ ನೀಡಿದರು.
ಹೃದಯದ ಸುರಕ್ಷೆಯ ಮಹತ್ವ, ಅದಕ್ಕೆ ಅಗತ್ಯವಿರುವ ಸಮತೋಲಿತ ಆಹಾರ, ವ್ಯಾಯಾಮದ ಬಗ್ಗೆ ಸಲಹೆಗಳನ್ನು ನೀಡಿದರು. ತಾವಿರುವ ಪರಿಸರದಲ್ಲಿ ಯಾರಿಗಾದರೂ ಹೃದಯಾಘಾತ ಸಂಭವಿಸಿದಲ್ಲಿ, ಅವರ ಜೀವ ಉಳಿಸಲು ತುರ್ತಾಗಿ ಮಾಡಬೇಕಾದ ಪ್ರಾಥಮಿಕ ಚಿಕಿತ್ಸೆಯ ಬಗ್ಗೆಯೂ ತಿಳಿಸಿಕೊಟ್ಟರು.
ನಿಯಮಿತವಾಗಿ ಹೃದಯದ ಆರೋಗ್ಯ ತಪಾಸಣೆಯ ಅವಶ್ಯಕತೆ, ಜಾಗತಿಕವಾಗಿ, ದೇಶದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವುದಕ್ಕೆ ಕಾರಣ, ಒತ್ತಡದ ನಿರ್ವಹಣೆ, ಸರಳ ಜೀವನ ಶೈಲಿ ರೂಢಿಸಿಕೊಳ್ಳುವ ಬಗೆ, ವ್ಯಸನಗಳಿಂದ ಮುಕ್ತರಾಗಿ ಬದುಕುವ ಕ್ರಮ ಹಾಗೂ ಹೃದಯ ಬೇನೆಗಳಿಗೆ ಇರುವ ಚಿಕಿತ್ಸಾ ವಿಧಾನಗಳ ಬಗ್ಗೆಯೂ ಪ್ರಾಥಮಿಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಪ್ರವೀಣ್, ಡಾ.ಹರೀಶ್ ಹಾಗೂ ಡಾ.ಅರ್ಜುನ್ ಅವರೊಂದಿಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಸಂವಾದ ನಡೆಸಿದರು.
ನಂಜಪ್ಪ ಲೈಫ್‌ಕೇರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅವಿನಾಶ್, ಆಡಳಿತ ನಿರ್ದೇಶಕ ಬೆನಕಪ್ಪ ಉಪಸ್ಥಿತರಿದ್ದರು. ಇದೇ ವೇಳೆ ‘ಆರ್ಟ್ ಫಾರ್ ಹಾರ್ಟ್’ ಆಶಯದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಡಾ.ನರೇಂದ್ರ ನಿಶಾನಿಮಠ ಹಾಗೂ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಡಾ.ಉಮಾ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.