ADVERTISEMENT

ಕೇಂದ್ರ ಸಚಿವ ಹೆಗಡೆ ವಿರುದ್ಧ ಬಿಎಸ್‌ವೈ ಷಡ್ಯಂತ್ರ?: ಗೋಪಾಲಕೃಷ್ಣ ಬೇಳೂರು

ಹೊಸ ಬಾಂಬ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:32 IST
Last Updated 19 ಅಕ್ಟೋಬರ್ 2018, 12:32 IST
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ   

ಶಿವಮೊಗ್ಗ:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರನ್ನು ಕೆಳಗಿಳಿಸಲು ಕುತಂತ್ರ ನಡೆಸಿತ್ತು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೊಸ ಬಾಂಬ್ ಸಿಡಿಸಿದರು.

ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಈಚೆಗೆ ದಲಿತ ಸಮುದಾಯದ ಕೆಲವು ಮುಖಂಡರ ಜತೆ ರಹಸ್ಯ ಸಭೆ ನಡೆಸಲಾಗಿತ್ತು. ಅನಂತ ಕುಮಾರ್ ಹೆಗಡೆ ವಿರುದ್ಧ ಷಡ್ಯಂತರ ರೂಪಿಸಿದ್ದರು. ಕೇಂದ್ರಮಟ್ಟದಲ್ಲಿ ಅವರ ಪ್ರಭಾವ ಅರಿತು, ನಂತರ ಸುಮ್ಮನಾದರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ದ್ರೋಹ ಬಗೆದಿದೆ. ಮತ ಬ್ಯಾಂಕ್‌ಗಾಗಿ ಬ್ರಾಹ್ಮಣ ಸಮುದಾಯ ಬಳಸಿಕೊಳ್ಳುತ್ತಿದೆ. ಆದರೆ, ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದೆ. ಲಿಂಗಾಯತ ಸಮುದಾಯದ ಆಯನೂರು ಅವರನ್ನು ಪದವೀಧರರ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡ ಅವರು ಬ್ರಾಹ್ಮಣ ಸಮುದಾಯದ ಗಣೇಶ್ ಕಾರ್ಣಿಕ್ ಅವರು ಗೆಲ್ಲದ ಹಾಗೆ ನೋಡಿಕೊಂಡರು ಎಂದು ದೂರಿದರು.

ADVERTISEMENT

ಮೀ–ಟೂ ಅಭಿಯಾನಕ್ಕೆ ಕೇಂದ್ರ ಸಂಪುಟದ ಒಂದು ವಿಕೆಟ್ ಪಥನವಾಗಿದೆ. ಇದು ಭವಿಷ್ಯದಲ್ಲಿ ಬಿಜೆಪಿ ದಿವಾಳಿತನದ ಮುನ್ಸೂಚನೆ. ಬಿಜೆಪಿ ಮುಖಂಡರಿಗೆ ಮಹಿಳೆಯರ ಮೇಲೆ ಇರುವ ಗೌರವ ಏನು ಎಂಬುದನ್ನು ಮೀ–ಟೂ ಅಭಿಯಾನ ತೋರಿಸುತ್ತಿದೆ ಎಂದು ಕುಟುಕಿದರು.

ಮೈತ್ರಿ ಸರ್ಕಾರ ಅಪವಿತ್ರ ಎಂದು ಟೀಕಿಸುವ ಯಡಿಯೂರಪ್ಪ ಜೆಡಿಎಸ್ ಜತೆ ಕೈ ಜೋಡಿಸಿ 2006ರಲ್ಲಿ ಸರ್ಕಾರ ರಚಿಸಿದ್ದಾಗ ಅಪವಿತ್ರ ಎಂದು ಏಕೆ ಅನಿಸಲಿಲ್ಲ ಎಂದು ಪ್ರಶ್ನಿಸಿದರು.

ತುಮರಿ ಸೇತುವೆ ನಿರ್ಮಾಣ ಮಾಡಲು ಸಿಗಂದೂರು ಕ್ಷೇತ್ರದ ಮೇಲೆ ಆಣೆ ಹಾಕಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರೂ ಕೆಲಸ ಆರಂಭವೇ ಆಗಿಲ್ಲ. ಇತ್ತ ಹಸಿರು ಮಕ್ಕಿ ಬಳಿ ಸೇತುವೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿ ಕೆಲಸ ಆರಂಭವಾಗಿದೆ ಎಂದರು.

‘ಸಣ್ಣಪುಟ್ಟ ಭೇದ ಮರೆತು ಎರಡೂ ಪಕ್ಷಗಳು ಮಧು ಬಂಗಾರಪ್ಪ ಅವರನ್ನು ಒಮ್ಮತದಿಂದ ಕಣಕ್ಕಿಳಿಸಿವೆ. ಅವರ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.