ಶಿವಮೊಗ್ಗ: ‘ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹಗೆ ಹುಚ್ಚು ಹಿಡಿದಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು’ ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಇಲ್ಲಿನ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಪ್ರತಾಪಸಿಂಹ ಪತ್ರಕರ್ತರಾಗಿ ಕೆಲಸ ಮಾಡಿದವರು. ಈ ದೇಶದ ಸಂವಿಧಾನ, ವ್ಯವಸ್ಥೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕಿತ್ತು. ಆದರೆ, ಜನರಿಂದ ಆಯ್ಕೆಯಾಗಿ ರಾಜ್ಯದ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿರುವ ಮಧು ಬಂಗಾರಪ್ಪ ಅವರನ್ನು ಅನ್ ಪಡ್ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಂತಹ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಕ್ಕೆ ಅರ್ಹನಲ್ಲ. ಬಿಜೆಪಿಯಿಂದ ಟಿಕೆಟ್ ವಂಚಿತರಾದ ಅವರು ಬೇಕಾಬಿಟ್ಟಿಯಾಗಿ ನಾಲಿಗೆ ಹರಿಬಿಡುತ್ತಿದ್ದಾರೆ. ದೇಶದ ಸಂವಿಧಾನದಲ್ಲಿರುವ ಅವಕಾಶದಿಂದಾಗಿಯೇ ಇಂದು ಮಧು ಬಂಗಾರಪ್ಪ ಅವರು ಶಾಸಕರಾಗಿ, ಶಿಕ್ಷಣ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಸಚಿವರಾದ ಮೇಲೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಫಲಿತಾಂಶದಲ್ಲಿ ಆಗಿರುವ ಗಣನೀಯ ಹೆಚ್ಚಳವೇ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ’ ಎಂದು ಹೇಳಿದರು.
‘ಪ್ರತಾಪಸಿಂಹ ಅಧಿಕಾರದಲ್ಲಿದ್ದಾಗ ಮಾಡಿಕೊಂಡ ಅವಾಂತರಗಳು ಏನೇನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕೀಯವಾಗಿ ನಿರಾಶ್ರಿತಗೊಂಡು ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿರುವ ಪ್ರತಾಪಸಿಂಹ ಕೂಡಲೇ ಮಧು ಬಂಗಾರಪ್ಪ ಹಾಗೂ ನಾಡಿನ ಜನತೆಗೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವರಿಷ್ಟರು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲವಾದರೆ ಅವರ ಹುಚ್ಚು ಹೇಳಿಕೆಗಳಿಂದ ಜನತೆ ಬಿಜೆಪಿ ವರಿಷ್ಟರ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಆದ್ದರಿಂದ ಇಂದು ಯುವ ಕಾಂಗ್ರೆಸ್‌ನಿಂದಲೇ ಪ್ರತಾಪಸಿಂಹನನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಇದರ ಸದ್ಬಳಕೆ ಆಗುವಂತೆ ಬಿಜೆಪಿ ವರಿಷ್ಟರು ನೋಡಿಕೊಳ್ಳಲಿ ಎಂದು ಅಣಕು ಪ್ರದರ್ಶನದ ಮೂಲಕ ಪ್ರತಾಪ್ ಸಿಂಹ ಮುಖವಾಡ ತೊಟ್ಟ ಯುವಕನಿಗೆ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು. ಪ್ರತಾಪ್‌ಸಿಂಹನ ಪಾತ್ರಧಾರಿ ಹುಚ್ಚನಂತೆ ಅಣಕಿಸುತ್ತಿರುವುದು ಕೂಡ ಗಮನಾರ್ಹವಾಗಿತ್ತು.
ಪ್ರತಾಪ್ ಸಿಂಹ ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡ ಅವರಿಗೆ ಪತ್ರ ಬರೆದು ಅದನ್ನು ನಗರ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಘಟಕ ಅಧ್ಯಕ್ಷ ಎಸ್. ಹರ್ಷಿತ್ ಗೌಡ, ಪ್ರಮುಖರಾದ ಆಸಿಫ್, ಚೇತನ್, ಮಧುಸೂದನ್, ಗಿರೀಶ್, ಚರಣ್ ಶೆಟ್ಟಿ, ಪ್ರವೀಣ್ ಕುಮಾರ್, ಸಕ್ಲೇನ್, ಪ್ರವೀಣ್, ಶಶಿಕುಮಾರ್, ವಿಜಯ್ ಶಿವಕುಮಾರ್, ಅನಿಲ್ ಪಾಟೀಲ್, ನಿಖಿಲ್, ನೂರ್ ಅಹ್ಮದ್, ಅಶೋಕ್, ಧನರಾಜ್ ಪುರಲೆ ಬಾಬು, ಅನಂತ್, ರವಿ ಕಟಿಕೆರೆ, ಗೌತಮ್, ಚಂದ್ರಾಜಿ ವರುಣ್, ತೌಫಿಕ್, ಅಶೋಕ್ ಇದ್ದರು.
ಆ್ಯಂಬುಲೆನ್ಸ್ ದುರ್ಬಳಕೆ, ಕ್ರಮ ಕೈಗೊಳ್ಳಿ:
ಡಿ.ಎಸ್.ಅರುಣ್ ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಂಸದ ಪ್ರತಾಪಸಿಂಹ ಅವರ ಮುಖವಾಡ ಧರಿಸಿ ಆ್ಯಂಬುಲೆನ್ಸ್ ನಲ್ಲಿ ಅವರನ್ನು ಹೊತ್ತೊಯ್ದಿದ್ದು ಸಾರ್ವಜನಿಕರ ತುರ್ತು ಬಳಕೆಗೆ ಬಳಸುವ ಆ್ಯಂಬುಲೆನ್ಸ್ ವಾಹನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆ್ಯಂಬುಲೆನ್ಸ್ ಬಳಸಿಕೊಳ್ಳಲು ಯಾವುದೇ ಅನುಮತಿ ಪಡೆಯದೇ ಇದ್ದದ್ದು ಕಾನೂನುಬಾಹಿರ. ಆ್ಯಂಬುಲೆನ್ಸ್ ದುರ್ಬಳಕೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.