ಶಿವಮೊಗ್ಗ: ‘ಯುವ ಪೀಳಿಗೆಯೇ ಈ ದೇಶದ ಶಕ್ತಿ ಮತ್ತು ಸಂಪತ್ತು. ದೇಶದ ಅಭಿವೃದ್ದಿಯಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಮಟ್ಟದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಹೇಳಿದರು.
ಜಿಲ್ಲಾಡಳಿತದಿಂದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರು ಸದಾ ಉತ್ಸುಕರಾಗಿ, ಜಾಗೃತರಾಗಿರಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಎಲ್ಲ ರಂಗಗಳಲ್ಲಿ ಸದಾ ಚಟುವಟಿಕೆಯಿಂದ ಇರಬೇಕು ಹಾಗೂ ಚಿಂತನಶೀಲರಾಗಿರಬೇಕು’ ಎಂದರು.
‘ಇಡೀ ಜಗತ್ತು ದೇಶವನ್ನು ಗಮನಿಸುತ್ತಿದೆ. ಯುವಜನತೆ ಇಂದಿನ ಯುವಜನೋತ್ಸವದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉನ್ನತ ಮಟ್ಟಕ್ಕೆ ಆಯ್ಕೆಯಾಗಬೇಕು’ ಎಂದು ಹಾರೈಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ‘ಯುವಜನತೆ ಉತ್ಸಾಹದಿಂದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಿಂದ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿಯನ್ನು ತರಬೇಕು’ ಎಂದು ಹಾರೈಸಿದರು.
ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಭಾಷಣ ಮತ್ತು ಕವಿತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಮೇರಾ ಯುವ ಭಾರತ್‌ನ ಅಧಿಕಾರಿ ಹೇಮಲತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.