ADVERTISEMENT

ಬೆಂಗಳೂರು ವಿ.ವಿ. ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:34 IST
Last Updated 29 ಮೇ 2022, 19:34 IST

ಬೆಂಗಳೂರು: ವಿದ್ಯಾರ್ಥಿಗಳ ವಿರುದ್ಧ ಹಣಕಾಸು ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿರುವುದನ್ನು ಖಂಡಿಸಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ ಬಂದ್‌ಗೆ ಕರೆ ನೀಡಿದೆ. ವಿಶ್ವವಿದ್ಯಾಲಯ ಆಡಳಿತ ಕಚೇರಿ ಮುಂಭಾಗ ಧರಣಿ ನಡೆಸಲು ನಿರ್ಧರಿಸಲಾಗಿದೆ.

ವಿಶ್ವವಿದ್ಯಾಲಯದ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ವಿಶ್ವೇಶ್ವರಯ್ಯ ಎಂಜಿನಿ ಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ಮೆಕ್ಯಾನಿಕಲ್‌ ವಿಭಾಗದ ಕಟ್ಟಡ ನಿರ್ಮಾಣಕ್ಕೆ ವರ್ಗಾಯಿಸಲು ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೇ 27ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಲೋಕೇಶ್‌, ಸತೀಶ್‌ ಹಾಗೂ ಇತರರು ಮಹಿಳಾ ಅಧಿಕಾರಿಯನ್ನು ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಹಣಕಾಸು ಅಧಿಕಾರಿ (ಪ್ರಭಾರ) ಆರ್‌. ಜಯಲಕ್ಷ್ಮಿ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಸಹ ದೂರು ಸಲ್ಲಿಸಿದ್ದರು.

ADVERTISEMENT

ಎಫ್ಐಆರ್ ದಾಖಲು: ‘ಹಣ ಕಾಸು ಅಧಿಕಾರಿ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಗಳ ಪಟ್ಟಿಯಲ್ಲಿ ವಿದ್ಯಾರ್ಥಿಗಳು ಎಂದಷ್ಟೇ ನಮೂದಿಸಲಾಗಿದೆ. ತನಿಖೆ ಬಳಿಕವೇ ಮತ್ತಷ್ಟು ಮಾಹಿತಿ ತಿಳಿಯಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.