ADVERTISEMENT

ಅಂದು ಬಂಡಾಯ, ಇಂದು ಪಕ್ಷ ಮಾನ್ಯ

ಕುಣಿಗಲ್ ಪುರಸಭೆಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:42 IST
Last Updated 19 ಮಾರ್ಚ್ 2014, 6:42 IST

ಕುಣಿಗಲ್‌: ಪುರಸಭೆ ಅಧ್ಯಕ್ಷ, ಉಪಾ­ಧ್ಯಕ್ಷರ ಚುನಾವಣೆ ಮಾರ್ಚ್‌ ೨೪ಕ್ಕೆ ನಿಗದಿಯಾಗಿದೆ. ಎರಡೂ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರು­ವು­ದರಿಂದ ತೀವ್ರ ಪೈಪೋಟಿ ಪ್ರಾರಂಭವಾಗಿದೆ.

ಪುರಸಭೆ ಚುನಾವಣೆ ಸಂದರ್ಭ ಮಾಜಿ ಶಾಸಕ ಎಸ್.ಪಿ.ಮುದ್ದ­ಹನುಮೇ­ಗೌಡ ಅವರಿಗೆ ಜೆಡಿಎಸ್ ಸಾರಥ್ಯ ನೀಡಲಾಗಿತ್ತು. ಇದರಿಂದ ಅಸ­ಮಾಧಾನಗೊಂಡಿದ್ದ ಮಾಜಿ ಸಚಿವ ಡಿ.ನಾಗರಾಜಯ್ಯ ತಮ್ಮ ಬೆಂಬಲಿ­ಗ­ರನ್ನು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದರು. ಶಾಸಕ ಬಿ.ಬಿ.ರಾಮ­ಸ್ವಾಮಿಗೌಡ ಕಾಂಗ್ರೆಸ್ ಮತ್ತು ಡಿ.ಕೃಷ್ಣ­ಕುಮಾರ್ ಬಿಜೆಪಿ ಸಾರಥ್ಯ ವಹಿಸಿದ್ದರು.

ಇದೀಗ ಬದಲಾದ ಪರಿಸ್ಥಿತಿಯಲ್ಲಿ ಮುದ್ದಹನುಮೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಂದು ಬಂಡಾಯವೆದ್ದಿದ್ದ ಡಿ.ನಾಗರಾಜಯ್ಯ ಇಂದು ಜೆಡಿಎಸ್‌ನಿಂದಲೇ ಆಯ್ಕೆ­ಯಾದ ಶಾಸಕರು. ಜೆಡಿಎಸ್‌ನ ಮೂಲ ಹಾಗೂ ಬಂಡಾಯ ಅಭ್ಯರ್ಥಿಗಳು ಅದಲು ಬದಲಾಗಿದ್ದಾರೆ. ಸಚಿವ ಡಿ.ಕೆ.­ಶಿವಕುಮಾರ ಅವರ ಸೋದರ ಡಿ.ಕೆ.­ಸುರೇಶ್ ಸಂಸದರಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ಪಾಳಯ ಸೋಲಿನ ಕಹಿ ಮರೆತಿದೆ. ಇತರ ಪಕ್ಷದ ಒಳಜಗಳ ಬಳಸಿಕೊಂಡು ಅಧಿಕಾರ ಹಿಡಿಯುವ ಹುರುಪು ಕಾಣಿಸಿಕೊಂಡಿದೆ.

ವಿಶ್ವಾಸ: ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಡಿ.ನಾಗರಾಜಯ್ಯ, ಜೆಡಿಎಸ್‌ಗೆ ಪ್ರಸ್ತುತ 15 ಸ್ಥಾನಗಳ ಬಹುಮತವಿದೆ. ನಮ್ಮ ಸದಸ್ಯರ ಒಗ್ಗಟ್ಟು ಒಡೆದು ಲಾಭ ಪಡೆಯಲು ಕಾಂಗ್ರೆಸ್ ಸದಸ್ಯರು ಪ್ರಯತ್ನಿಸುತ್ತಿದ್ದಾರೆ. ಕಳೆದ ಅಧಿಕಾರ ಅವಧಿಯಲ್ಲಿ ಕೇವಲ ಎರಡು ಸ್ಥಾನ ಪಡೆದ ಕಾಂಗ್ರೆಸ್ ಸದಸ್ಯರು ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿ­ಕೊಂಡು ನಿಗದಿತ ಅವಧಿಯಲ್ಲಿ ಒಪ್ಪಂದ­ದಂತೆ ರಾಜೀನಾಮೆ ನೀಡದೆ ಸಂಪೂರ್ಣ ಅವಧಿ ಅಧಿಕಾರ ನಡೆಸಿದ್ದನ್ನು ಜೆಡಿಎಸ್ ಸದಸ್ಯರು ಮರೆ­ತಿಲ್ಲ. ಸದಸ್ಯರ ಒಮ್ಮತದ ತೀರ್ಮಾನದ ಮೇಲೆ ಅಧ್ಯಕ್ಷ– ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.

ಆಕಾಂಕ್ಷಿಗಳು: ಜೆಡಿಎಸ್‌ ಕೆ.ಎಲ್.­ಹರೀಶ್, ಇ.ಮಂಜು ಮತ್ತು ಚಂದ್ರ­ಶೇಖರ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ­ಗಳಾಗಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ರಂಗಸ್ವಾಮಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ­ಯಾಗಿದ್ದಾರೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಸದಸ್ಯರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

ಪಕ್ಷಗಳ ಬಲಾಬಲ
ಕಾಂಗ್ರೆಸ್– 7
ಜೆಡಿಎಸ್– 7
ಬಂಡಾಯ ದಳ– 7
ಬಿಜೆಪಿ–  1
ಪಕ್ಷೇತರ– 1
ಒಟ್ಟು 23

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.