ADVERTISEMENT

ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ನಿಂಗಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 11:10 IST
Last Updated 27 ಜನವರಿ 2012, 11:10 IST
ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ನಿಂಗಪ್ಪ ಆಕ್ರೋಶ
ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ನಿಂಗಪ್ಪ ಆಕ್ರೋಶ   

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಜನರಿಗೆ ಹಂಚುತ್ತಿರುವ ಹಣ ಲೂಟಿ ಮಾಡಿದ ಹಣವೇ ಹೊರತು ಬೆವರು ಸುರಿಸಿ ದುಡಿದ ಹಣವಲ್ಲ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಹಣ ಹಂಚುತ್ತಿರುವವರ ಹಿನ್ನೆಲೆಯನ್ನು ಜನ ಕೇಳಬೇಕು ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಮನವಿ ಮಾಡಿದರು.

ಜೆಡಿಎಸ್ ನಗರ ಘಟಕ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾ ರಂಭದಲ್ಲಿ ಮಾತನಾಡಿದರು. ಎಂಟು ವರ್ಷ ಕಾಲ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಸಿಹಿ-ಕಹಿ ನೆನಪುಗಳನ್ನು ಹಂಚಿಕೊಂಡರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಕೇವಲ ಹಣ ಹಂಚುವುದು, ಹಣ ಬಲದಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂಬುದು ಸುಳ್ಳು. ಮೊದಲ ಸಲ ವಿಧಾನಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಒಂದು ರೂಪಾಯಿ ಸ್ವಂತ ಹಣವನ್ನು ಚುನಾವಣೆಗಾಗಿ ವೆಚ್ಚ ಮಾಡಿರಲಿಲ್ಲ.

ಮತದಾರರು, ಅಭಿಮಾನಿಗಳು ಹಣ ಕೂಡಿಟ್ಟು ಚುನಾವಣೆಗೆ ವೆಚ್ಚ ಮಾಡಿದರು. ಚುನಾವಣೆ ಬಳಿಕ ಉಳಿದ ಹಣವನ್ನು ಅಭಿಮಾನಿಗಳಿಗೆ ವಾಪಸ್ ನೀಡಿದೆ ಎಂದು ನೆನಪು ಮಾಡಿಕೊಂಡರು.

ಹೊರಗಿನಿಂದ ಬಂದವರಿಗೆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೆ ಗೆದ್ದ ನಂತರ ಜನರ ಕೈಗೆ ಸಿಗಲಾರರು. ನನ್ನ ಬಳಿ ಹಣ ಇಲ್ಲದಿರಬಹುದು. ಹಣ ಇರುವ ಕ್ಷೇತ್ರದವರಿಗೆ ಟಿಕೆಟ್ ಕೊಟ್ಟರೆ ತಮ್ಮ ಅಭ್ಯಂತರವೇನಿಲ್ಲ ಎಂದು ಹೇಳುವ ಮೂಲಕ ಮಾಜಿ ಶಾಸಕ ಬಿ.ಸಿ. ಗೌರಿಶಂಕರ್ ವಿರುದ್ಧವೂ ಹರಿಹಾ ಯ್ದರು. ಪಕ್ಷದ ಅಧ್ಯಕ್ಷ ಸ್ಥಾನ ಸ್ವೀಕರಿ ಸಿದ ವರ್ಷ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 9 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿತ್ತು ಎಂದು ನೆನಪು ಮಾಡಿಕೊಂಡರು.

ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಗಳನ್ನು ಕೆಲವರು ಮಾಡುತ್ತಿದ್ದರು. ಅಂಥ ಆರೋಪಗಳಿಗೆ ಬೆಲೆ ಕೊಡುತ್ತಿರ ಲಿಲ್ಲ. ಯಾರನ್ನು ವಿರೋಧಿಸಲಿಲ್ಲ. ಚುನಾವಣೆ ವೇಳೆ ಅಭ್ಯರ್ಥಿಗಳ ಟಿಕೆಟ್ ಕೊಡುವ ವಿಷಯದಲ್ಲಿ ಲಾಬಿ ಮಾಡ ಲಿಲ್ಲ. ಎಲ್ಲವು ಪಕ್ಷದ ತೀರ್ಮಾನದಂತೆ ನಡೆಸಲಾಗುತ್ತಿತ್ತು ಎಂದರು.

ಸಂಘಟನೆ: ಪಕ್ಷದ ನೂತನ ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಪಕ್ಷ ರಾಜಕೀಯವಾಗಿ ಬಲಾಢ್ಯವಾಗಿದ್ದರೂ ಸಂಘಟನೆಯಲ್ಲಿ ಬಲವಾಗಿಲ್ಲ. ಪಕ್ಷದ ವೇದಿಕೆಯಲ್ಲಿ ಸಾಮೂಹಿಕ ಸಂಘಟನೆಗಳನ್ನು ಹುಟ್ಟು ಹಾಕಬೇಕು. ಬಿಜೆಪಿಗೆ ರಾಜಕೀಯವಾಗಿ ಬಲ ಇಲ್ಲದಿದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡಿ 32 ಸಾಮೂಹಿಕ ಸಂಘಟನೆಗಳನ್ನು ಕಟ್ಟಿದೆ ಎಂದು ಹೇಳಿದರು.

ಇಬ್ಬರು ಮುಖ್ಯಮಂತ್ರಿ: ರಾಜ್ಯದಲ್ಲಿ ಜಾತಿವಾದಿಗಳ ಗುಂಪು ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಒಂದು ಸರ್ಕಾರ ವಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತೊಂದು ಸರ್ಕಾರ ಆಡಳಿತ ನಡೆಸುತ್ತಿದೆ. ಈ ದ್ವಂದ್ವ ಸರ್ಕಾರವನ್ನು ಕಿತ್ತೊತೆಗೆಯಬೇಕು ಎಂದು ಜೆಡಿಎಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಕಿಡಿಕಾರಿದರು.
ಜೆಡಿಎಸ್ ರಾಜ್ಯಕ್ಕೆ ಪರ್ಯಾಯ ವಾಗಿದೆ. ಕಾಂಗ್ರೆಸ್ ಹೆಸರಿನಲ್ಲಿ ಜೀವಿಸು ತ್ತಿದೆ. ಜನರ ಹಿತ ಕಡೆಗಣಿಸಿದ್ದು, ನಿರ್ನಾಮವಾಗಿದೆ. ಬಿಜೆಪಿ ಜಾತಿವಾದಿ ಗಳ ಕೂಟ ಎಂದು ಜರಿದರು.

ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಎಚ್.ಟಿ.ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ನಗರ ಘಟಕ ಅಧ್ಯಕ್ಷ ವಿಜಯಪ್ರಕಾಶ್ ಮಿರ್ಜಿ, ಮುಖಂಡರಾದ ಕೆ.ಬಿ. ಬೋರೇಗೌಡ, ಮಲ್ಲಿಕಾರ್ಜುನ್, ರವಿ ಜಹಾಂಗೀರ್, ಮುನೀರ್ ಅಹಮದ್, ರಾಣಿ ಚಂದ್ರಶೇಖರ್, ಮಂಜುನಾಥ್, ನರಸಿಂಹರಾಜು, ಸತೀಶ್, ಜಯಲಕ್ಷ್ಮೀ, ತಾಹಿರಾಭಾನು, ವಿಜಯಕುಮಾರ್ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.