ADVERTISEMENT

ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 8:50 IST
Last Updated 7 ಮಾರ್ಚ್ 2011, 8:50 IST

ಚಿಕ್ಕನಾಯಕನಹಳ್ಳಿ:  ಗ್ರಾಮ ಮಟ್ಟದಲ್ಲಿ ಸರ್ಕಾರದ ಯೋಜನೆಗಳ ವೈಫಲ್ಯಕ್ಕೆ ಪಂಚಾಯಿತಿ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ದಯಾನಂದ್ ಹೇಳಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿನ ವೈಫಲ್ಯತೆಯ ಕಾರಣದಿಂದ 2011-12ನೇ ಸಾಲಿಗೆ ಕೇವಲ ರೂ.12 ಕೋಟಿಗೆ ಸೀಮಿತವಾಗಿದೆ. 

ಕಳೆದ ಸಾರಿ ತಾಲ್ಲೂಕಿಗೆ ರೂ.29 ಕೋಟಿ ಅನುದಾನ ಬಂದಿದ್ದರೂ ಖರ್ಚಾಗಿದ್ದು ಕೇವಲ ರೂ.15 ಕೋಟಿಗಳು ಮಾತ್ರ ಎಂದರು. ಸದಸ್ಯ ಶಶಿಧರ್, ಆರ್.ಪಿ. ವಸಂತಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ. ಪಂಚಾಕ್ಷರಿ, ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ ಬಗ್ಗೆ ಗ್ರಾಮೀಣಮಟ್ಟದಲ್ಲಿ ಜನರಿಗೆ ಯಾವುದೇ ಮಾಹಿತಿಗಳನ್ನು ಪಂಚಾಯಿತಿ ಕಾರ್ಯದರ್ಶಿಗಳು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಬಸವ ಇಂದಿರಾ ವಸತಿ ಯೋಜನೆಯಡಿ ಐದು ಪಂಚಾಯಿತಿಗಳಿಂದ ಒಟ್ಟು 4000 ಗುಡಿಸಲು ವಾಸಿಗಳನ್ನು ಗುರುತಿಸಬೇಕಿದ್ದು ಈವರೆಗೂ ಕಾರ್ಯದರ್ಶಿಗಳಿಂದ ಸಮರ್ಪಕ ಪಟ್ಟಿ ತಯಾರಾಗಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ದಯಾನಂದ್ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ಚಪ್ಪೆ ರೋಗದಿಂದ  ತಾಲ್ಲೂಕಿನ ದಾಸಿಹಳ್ಳಿ ಗ್ರಾಮದಲ್ಲಿ ಐದಾರು ರಾಸುಗಳು ಸಾವನ್ನಪ್ಪಿವೆ.

ಇದಕ್ಕೆ ಮತಿಘಟ್ಟ ಪಶು ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸದಸ್ಯ ನಿರಂಜನ್ ದೂರಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಆರ್. ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ. ಫಾತಿಮಾ, ಶಿರಾ ತಾಲ್ಲೂಕು ಪಂಚಾಯಿತಿ ಆಧ್ಯಕ್ಷ ಸತ್ಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ. ಪಂಚಾಕ್ಷರಿ, ಜಾನಮ್ಮ, ಲೋಹಿತಾಬಾಯಿ  ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.