ADVERTISEMENT

ಎಂ.ಜಿ.ರಸ್ತೆ: 45 ಅಡಿ ಸೀಮಿತಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 7:15 IST
Last Updated 17 ಜೂನ್ 2011, 7:15 IST

ತುಮಕೂರು: ನಗರದ ಹೃದಯ ಭಾಗದಲ್ಲಿರುವ ಎಂ.ಜಿ.ರಸ್ತೆಯನ್ನು 60 ಅಡಿಗೆ ವಿಸ್ತರಿಸಬೇಕೆನ್ನುವ ಕೆಲವು ಹೋರಾಟಗಾರರ ನಿಲುವನ್ನು ಎಂ.ಜಿ.ರಸ್ತೆ ಕಟ್ಟಡ ಮಾಲೀಕರು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ. ಎಂ.ಜಿ. ರಸ್ತೆ ವಿಸ್ತರಣೆಯನ್ನು 45 ಅಡಿಗೆ ಸೀಮಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕೃಷ್ಣ ಚಿತ್ರಮಂದಿರ, ರೇಣುಕಾ ಫ್ಯಾಷನ್, ಮೊಬೈಲ್‌ಜೋನ್, ಹ್ಯಾಂಡ್‌ಲೂಮ್ ಹೌಸ್, ಗಣಪತಿ ಟ್ರೇಡರ್ಸ್‌, ಪಾಂಡುರಂಗ ಏಜೆನ್ಸಿಸ್, ಅಕ್ಷಯ ಫಾರ್ಮಾ, ಶ್ರೀಕೃಷ್ಣ ಸ್ವೀಟ್ಸ್ ಸೇರಿದಂತೆ ನೂರಕ್ಕೂ ಹೆಚ್ಚು ಕಟ್ಟಡ ಮಾಲೀಕರು ಮತ್ತು ಬಾಡಿಗೆದಾರರ ಸಹಿ ಇರುವ ಪತ್ರದ ಮುಖ್ಯಾಂಶಗಳು ಇಂತಿವೆ.

ಅನಧಿಕೃತ ಕಟ್ಟಡ, ಸರ್ಕಾರಿ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದರೆ ಅಂಥವನ್ನು ತೆರವುಗೊಳಿಸಲು ಯಾರೂ ಅಡ್ಡಿ ಬರುವುದಿಲ್ಲ. ಆದರೆ ಮೂಲ ದಾಖಲೆಗಳಿರುವ ಅಧಿಕೃತ ಸ್ವಂತ ಕಟ್ಟಡಗಳನ್ನು ಏಕಾಏಕಿ ತೆರವುಗೊಳಿಸಲು ಸಾಧ್ಯವಿಲ್ಲ. ಅವಶ್ಯಕತೆ ಬಂದರೆ ಸರ್ಕಾರ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಿ ವಶಪಡಿಸಿಕೊಳ್ಳಬಹುದು ಅಥವಾ ಟಿಡಿಆರ್ (ಟ್ರಾನ್ಸ್‌ಫರ್ ಆಫ್ ಡೆವಲಪ್‌ಮೆಂಟ್ ರೈಟ್ಸ್) ಪಡೆದುಕೊಳ್ಳಬಹುದು ಎಂದು ಹೇಳಿದೆ.

`ಸರ್ಕಾರ ನೀಡುವ ಪರಿಹಾರ ಸಾಲದೆಂದು ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಬಹುದು. ಆಗ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಬಿ.ಎಚ್.ರಸ್ತೆಯಲ್ಲಿ 8 ಮಂದಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಪರಿಹಾರ ಕೊಡದೆ ಅವರ ಆಸ್ತಿ ಮುಟ್ಟುವಂತಿಲ್ಲ. ಹೀಗಾಗಿ ರಸ್ತೆ ವಿಸ್ತರಣೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ~.

2009 ಜನವರಿಯಲ್ಲಿ ನಗರಸಭೆ ಆಯುಕ್ತರಾಗಿದ್ದ ತುಳಸಿ ಮದಿನೇನಿ ಎಂ.ಜಿ.ರಸ್ತೆ ಕಟ್ಟಡ ಮಾಲೀಕರ ಸಭೆ ಕರೆದು ಚರ್ಚಿಸಿದ್ದರು. 40 ಅಡಿ ರಸ್ತೆ ವಿಸ್ತರಣೆಗೆ ಸರ್ವರೂ ಸಮ್ಮತಿಸಿದ್ದರು. ಇಂದಿನ ಆಯುಕ್ತರು 50 ಅಡಿ ವಿಸ್ತರಣೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಜೂನ್ 4ರಂದು ನಡೆದ ಎಂ.ಜಿ.ರಸ್ತೆ ಕಟ್ಟಡ ಮಾಲೀಕರ ಸಭೆಯಲ್ಲಿ ಈ ವಿಚಾರ ಸಾಕಷ್ಟು ಚರ್ಚೆಯಾಯಿತು. ಚರ್ಚೆಯ ನಂತರ ಆಯುಕ್ತರು 45 ಅಡಿ ವಿಸ್ತರಣೆಗೆ ಒಪ್ಪಿದರು. ಇದಕ್ಕೆ ಕಟ್ಟಡ ಮಾಲೀಕರು ಒಪ್ಪದಿದ್ದರೆ ರಸ್ತೆ ಅಭಿವೃದ್ಧಿ ಹಣವನ್ನು ಬೇರೆಡೆಗೆ ಉಪಯೋಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದರು.

ಕಾನೂನು ಹೋರಾಟ ಪ್ರಾರಂಭವಾದರೆ ಎಂ.ಜಿ.ರಸ್ತೆ ಅಭಿವೃದ್ಧಿ ಕಾರ್ಯ ಹಲವು ವರ್ಷ ಮುಂದಕ್ಕೆ ಹೋಗುತ್ತದೆ. ಈಗ ಸಿಡಿಪಿ ಪ್ರಕಾರ 60 ಅಡಿ ವಿಸ್ತರಣೆ ಅನಿವಾರ್ಯ ಎಂದಾದರೆ ಅಧಿಕೃತ ದಾಖಲೆ ಹೊಂದಿರುವವರು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.

100 ಅಡಿಗೆ ವಿಸ್ತರಿಸಬೇಕಿದ್ದ ಆಂಜನೇಯ ವೃತ್ತ- ಚರ್ಚ್ ವೃತ್ತದ ರಸ್ತೆಯನ್ನು ಕೇವಲ 60 ಅಡಿಗೆ ಸೀಮಿತಗೊಳಿಸಲಾಗಿದೆ. ಈ ರಸ್ತೆಯಲ್ಲಿ ಎರಡೂ ದಿಕ್ಕಿನಿಂದ ಲಾರಿ, ಬಸ್‌ಗಳು ಸಂಚರಿಸುತ್ತಿವೆ. ಸದಾ ಲಾರಿಗಳಿಂದ ತುಂಬಿರುವ ಮಂಡಿಪೇಟೆ ರಸ್ತೆಯ ಕಟ್ಟಡರೇಖೆ ಸೆಟ್‌ಬ್ಯಾಕ್ ಕಾನೂನುಬದ್ಧ ವಾಗಿದೆಯೇ? ಸೋಮೇಶ್ವರಪುರಂ ರಸ್ತೆ ಸಿಡಿಪಿ ಪ್ರಕಾರ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ತುಮಕೂರು ಅಭಿವೃದ್ಧಿ ಚಿಂತನೆ ಮಾಡುವವರು ನಗರದ ಎಲ್ಲ ರಸ್ತೆ ಬಗ್ಗೆ ಒಂದೇ ರೀತಿಯ ಅಭಿಪ್ರಾಯ ಹೊಂದಬೇಕು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.