ADVERTISEMENT

ಎರಡು ಬಾರಿ ಆಧಾರ್: ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 6:55 IST
Last Updated 14 ಜನವರಿ 2011, 6:55 IST

ತುಮಕೂರು: ಆಧಾರ್ ಯೋಜನೆಯಡಿ ಎರಡನೆ ಬಾರಿ ವಿಶಿಷ್ಟ ಗುರುತಿನ ಸಂಖ್ಯೆ ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಜಿಲ್ಲಾಡಳಿತ ವತಿಯಿಂದ ಬುಧವಾರ ಯುಐಡಿ ನೋಂದಣಿ ಪರಿಶೀಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜ್ಯದ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದೇ ಆಧಾರ್ ಯೋಜನೆ ಮುಖ್ಯ ಉದ್ದೇಶ. ಈ ಯೋಜನೆಯಡಿ ಒಬ್ಬ ವ್ಯಕ್ತಿ ಎರಡು ಬಾರಿ ವಿಶಿಷ್ಟ ಗುರುತಿನ ಸಂಖ್ಯೆ ಪಡೆಯುವುದು ಅಪರಾಧ. ಅಲ್ಲದೆ ಗುರುತಿನ ಸಂಖ್ಯೆ ಏರುಪೇರು ಆಗುವ ಸಂಭವ ಇರುತ್ತದೆ ಎಂದು ತಿಳಿಸಿದರು.

ಪ್ರಾಧಿಕಾರದ ನಿಯಮದಂತೆ ಪ್ರಾಮಾಣಿಕವಾಗಿ ವಿಶಿಷ್ಟ ಗುರುತಿನ ಸಂಖ್ಯೆ ಪಡೆದು, ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಜಿಲ್ಲಾಡಳಿತದಿಂದ ಸ್ಥಾಪಿಸಲ್ಪಟ್ಟ ನೋಂದಣಿ ಕೇಂದ್ರಗಳು, ತುಮಕೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿ ಅಥವಾ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮಕ್ಕಳನ್ನು ಶಾಲೆಗೆ ಸೇರಿಸಲು, ವೃದ್ಧಾಪ್ಯ ವೇತನ ಪಡೆಯಲು, ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಆರೋಗ್ಯ ಸೇವೆ ಸೇರಿದಂತೆ ಇನ್ನು ಹಲವು ಪ್ರಯೋಜನ ಪಡೆಯಲು ಆಧಾರ್ ಪರಿಹಾರ ನೀಡಲಿದೆ ಎಂದರು.

ಯುಐಡಿ ನೋಂದಣಿ ಪ್ರಕ್ರಿಯೆಯಲ್ಲಿ ಪರಿಶೀಲಕರ ಕರ್ತವ್ಯ ಮತ್ತು ಜವಾಬ್ದಾರಿ ಹೆಚ್ಚಿನದು. ಮಾಹಿತಿ ಪರಿಶೀಲನೆಯ ನಂತರವೂ ಮಾಹಿತಿಯಲ್ಲಿ ದೋಷಗಳಿದ್ದರೆ ಪರಿಶೀಲಕರೇ ಜವಾಬ್ದಾರರಾಗಿರುತ್ತಾರೆ. ಸಾರ್ವಜನಿಕರಿಂದ ಮಾಹಿತಿ ಪಡೆಯುವ ಅಧಿಕೃತ ದಾಖಲಾತಿಗಳ ಪರಿಶೀಲನೆ ಒಂದು ಪ್ರಮುಖಘಟ್ಟ. ಈ ಹಿನ್ನೆಲೆಯಲ್ಲಿ ನಿಖರ, ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಪ್ರಕ್ರಿಯೆಯಲ್ಲಿ ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ವಿಶಿಷ್ಟ ಪ್ರಾಧಿಕರದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ತಿಳಿಸಿದರು.

ಸಾರ್ವಜನಿಕರು ವಿಳಾಸದ ದಾಖಲೆಗಾಗಿ ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್, ಪಾಸ್‌ಬುಕ್, ಅಂಚೆ ಕಚೇರಿ ಸ್ಟೇಟ್‌ಮೆಂಟ್, ಪಾಸ್‌ಬುಕ್, ಮತದಾರರ ಗುರುತಿನ ಚೀಟಿ, ಭಾವಚಿತ್ರದೊಂದಿಗಿರುವ ಪಡಿತರ ಚೀಟಿ, ಚಾಲನಾ ಪರವಾನಗಿ ಪತ್ರ, ಭಾವಚಿತ್ರದೊಂದಿಗಿರುವ ಸರ್ಕಾರಿ ಗುರುತಿನ ಚೀಟಿ, ಜೀವ ವಿಮಾ ಪಾಲಿಸಿ, 3 ತಿಂಗಳಿಗಿಂತ ನಿಕಟ ಪೂರ್ವ ವಿದ್ಯುತ್ ಬಿಲ್, ನೀರಿನ ಬಿಲ್, ಸ್ಥಿರ ದೂರವಾಣಿ ಬಿಲ್ ಸೇರಿದಂತೆ ನಿಗದಿಪಡಿಸಿರುವ 29 ದಾಖಲೆಗಳಲ್ಲಿ ಯಾವುದಾದರೂ ಒಂದು ಮೂಲ ಪ್ರತಿ ಸಲ್ಲಿಸಬೇಕು. ಗುರುತಿನ ದಾಖಲೆಗಾಗಿ ಭಾವಚಿತ್ರ ಇರುವ ಗುರುತಿನ ಚೀಟಿಯಲ್ಲಿನ 17 ದಾಖಲೆಗಳಲ್ಲಿ ಒಂದು ಮೂಲ ಪ್ರತಿ ದಾಖಲಿಸಬೇಕಿದೆ.

ಜನ್ಮದಿನಾಂಕಕ್ಕಾಗಿ ಜನನ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸ್‌ಪೋರ್ಟ್ ಸಲ್ಲಿಸಬೇಕಿದೆ ಎಂದು ರವೀಂದ್ರ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ವಿಭಾಗಾಧಿಕಾರಿ ಕುಮಾರ್, ಆಧಾರ್ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಇನ್ನಿತರೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.