ADVERTISEMENT

ಕಚೇರಿ ಬಾಗಿಲು ಹಾಕಿದ ಅಧಿಕಾರಿಗಳು

ಪುರಸಭೆ ಸಿಬ್ಬಂದಿಗೆ ಮಾಹಿತಿ ಕೇಳಿ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 5:40 IST
Last Updated 6 ಫೆಬ್ರುವರಿ 2014, 5:40 IST
ಮಾಹಿತಿ ಹಕ್ಕು ಯೋಜನೆಯಡಿ ದಾಖಲೆ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಣಿಗಲ್ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಬುಧವಾರ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು.
ಮಾಹಿತಿ ಹಕ್ಕು ಯೋಜನೆಯಡಿ ದಾಖಲೆ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಣಿಗಲ್ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಬುಧವಾರ ಕಚೇರಿ ಬಾಗಿಲು ಹಾಕಿ ಪ್ರತಿಭಟಿಸಿದರು.   

ಕುಣಿಗಲ್‌: ಮಾಹಿತಿ ಹಕ್ಕು ಮತ್ತು ಸಕಾಲ ಯೋಜನೆಯಡಿ ದಾಖಲೆ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಪುರಸಭೆಗೆ ಬೀಗ ಜಡಿದು ಬುಧವಾರ ಕಚೇರಿ ಎದುರು ಪ್ರತಿಭಟಿಸಿದರು.

ಮುಖ್ಯಾಧಿಕಾರಿ ಅನ್ನದಾನಿ ಮಾತನಾಡಿ, ದಿನೇಶ್‌ ಎಂಬಾತ ಮಾಹಿತಿ ಕಾಯಿದೆ ಮತ್ತು ಸಕಾಲ ಯೋಜನೆಯಡಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ದಾಖಲೆಗಳು ಸಿದ್ಧವಾಗಿದ್ದರೂ ವಿನಾಕಾರಣ ಮೇಲಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ. ಪುರಸಭೆ ವ್ಯಾಪ್ತಿ ಮೀರಿದ ಭೂ ಪರಿವರ್ತನೆ ಮಾಡಿಕೊಡಲು ದಿನೇಶ್ ಈ ಹಿಂದೆ ಅರ್ಜಿ ಸಲ್ಲಿಸಿದ್ದರು.

ಸೂಕ್ತ ಹಿಂಬರಹ ನೀಡಿದ್ದರೂ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುವುದನ್ನು ನಿಲ್ಲಿಸಿಲ್ಲ ಎಂದು ದೂರಿದರು. ಕಂದಾಯ ನಿರೀಕ್ಷಕ ರಮೇಶ್‌, ಗುಮಾಸ್ತ ರಮೇಶ, ವ್ಯವಸ್ಥಾಪಕ ಹನುಮಂತಯ್ಯ, ಪರಿಸರ ಎಂಜಿನಿಯರ್ ಶಿಲ್ಪಾ ಇತರರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಸದಸ್ಯ ಕೆ.ಎಲ್‌.ಹರೀಶ್ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು.

‘ಮಾಹಿತಿ ಕೇಳಿದವರಿಗೆ ಸೂಕ್ತ ಮಾಹಿತಿ ಒದಗಿಸಿ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಬದಲು ಅಧಿಕಾರಿಗಳೇ ಸತ್ಯಾಗ್ರಹದ ಹಾದಿ ತುಳಿಯುವುದು ತಪ್ಪು. ತಮ್ಮ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು– ಸಚಿವರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ಹರಿಹಾಯ್ದ ನಂತರ ಸಿಬ್ಬಂದಿ ಕಚೇರಿ ಬಾಗಿಲು ತೆಗೆದು ಕೆಲಸ ಆರಂಭಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ದಿನೇಶ್‌, ಸಕಾಲ ಹಾಗೂ ಮಾಹಿತಿ ಹಕ್ಕು ಯೋಜನೆಯಡಿ ಪುರಸಭೆಯಿಂದ ಕೆಲವು ಮಾಹಿತಿ ಕೇಳಿರುವುದು ನಿಜ. ಸೂಕ್ತ ದಾಖಲೆ ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಪುರಸಭೆ ವ್ಯಾಪ್ತಿಯನ್ನು ಮೀರಿದ ಕಂದಾಯ ಪ್ರದೇಶಕ್ಕೂ ನಿಯಮ­ಬಾಹಿರವಾಗಿ ಖಾತೆ ಮಾಡಿಕೊಡುತ್ತಿದ್ದಾರೆ. ತಮ್ಮ ಕೃತ್ಯ ಬಯಲಾಗುವ ಆತಂಕದಲ್ಲಿ ಪ್ರತಿಭಟನೆಯ ನಾಟಕವಾಡಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT