ADVERTISEMENT

ಕನ್ನಡ ನಾಡು-ನುಡಿ ಸಮೃದ್ಧಗೊಳಿಸಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 5:58 IST
Last Updated 30 ನವೆಂಬರ್ 2017, 5:58 IST
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ರಂಗೋಲಿ ಬಿಡಿಸುವಲ್ಲಿ ತಲ್ಲೀನರಾಗಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ರಂಗೋಲಿ ಬಿಡಿಸುವಲ್ಲಿ ತಲ್ಲೀನರಾಗಿದ್ದರು.   

ತುಮಕೂರು: ‘ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದಕ್ಕೂ ಮೊದಲು ಕನ್ನಡ ನಾಡು-ನುಡಿಯನ್ನು ಸಮೃದ್ಧಗೊಳಿಸುವತ್ತ ಎಲ್ಲ ಕನ್ನಡ ಮನಸುಗಳು ಮುಂದಾಗಬೇಕು’ ಎಂದು ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತ ಎನ್.ನಾಗಪ್ಪ ತಿಳಿಸಿದರು.

ನಗರದ ಬಾಲಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.

‘ಪೋಷಕರು ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಬೇಕು. ಕನ್ನಡ ಭಾಷೆಯಲ್ಲಿ ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪಡೆದವರ‍್ಯಾರು ಆಂಗ್ಲ ಭಾಷೆಯಲ್ಲಿ ಅಧ್ಯಯನ ಮಾಡಿದವರಲ್ಲ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

ADVERTISEMENT

ಕಲೆಗೆ ಬಡವ-ಶ್ರೀಮಂತ ಎಂಬ ಬೇಧ-ಭಾವ ಇರುವುದಿಲ್ಲ. ಪ್ರತಿಭೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ ಎನ್ನುವುದನ್ನು ಅರಿತು ಮಕ್ಕಳು ತಮ್ಮಲ್ಲಿನ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ಪ್ರತಿಭೆ ಎಂಬುದು ಜಾತಿ, ಧರ್ಮಗಳನ್ನು ಮೀರಿದ ಶಕ್ತಿಯಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಸಹ ಮಕ್ಕಳಲ್ಲಿನ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಾಗುತ್ತದೆ ಎಂದರು.

ಜಿಲ್ಲಾ ಬಾಲಭವನ ಸಂಘದ ಸದಸ್ಯ ಎಂ.ಬಸವಯ್ಯ ಮಾತನಾಡಿ, ’ ಮಕ್ಕಳು ಪ್ರೌಢಶಾಲಾ ಹಂತ ತಲುಪಿದರೂ ಸರಿಯಾಗಿ ಕನ್ನಡ ಭಾಷೆ ಓದಲು-ಬರೆಯಲು ಬರುವುದಿಲ್ಲ. ಹೀಗಿದ್ದರೆ ಕನ್ನಡ ಉಳಿವು ಸಾಧ್ಯವೇ? ಎಂದು ಪ್ರಶ್ನಿಸಿದರು.

ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಮಕ್ಕಳಿಗೆ ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ, ಮಮತಾ, ಜಿಲ್ಲಾ ಬಾಲಭವನ ಸಂಘದ ಸದಸ್ಯ ಡಿ.ಬಸವರಾಜು, ಟಿ.ರಾಜು, ಶ್ರೀಧರ್, ವಾಸಂತಿ ಉಪ್ಪಾರ್, ದಿನೇಶ್, ಅನ್ನಪೂರ್ಣಮ್ಮ ಇದ್ದರು.

ತಂದೆ ತಾಯಿಗೆ ಅಗೌರವ ತೋರಿಸಿದಂತೆ
ಕನ್ನಡ ನಾಡು-ನುಡಿ, ಸಂಸ್ಕೃತಿ ಪರಂಪರೆಯನ್ನು ಯಾರು ಗೌರವಿಸುವುದಿಲ್ಲವೋ ಅಂಥವರು ತಮ್ಮ ತಾಯಿ-ತಂದೆಗೆ ಅಗೌರವ ತೋರಿದಂತೆ. ಕನ್ನಡ ನಾಡಲ್ಲಿ ಹುಟ್ಟಿದ ನಾವು ಅನ್ಯ ಭಾಷೆಗಳನ್ನು ಅಳವಡಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಎನ್‌.ನಾಗಪ್ಪ ತಿಳಿಸಿದರು.

ಹಿಂದಿನ ಕಾಲದಲ್ಲಿ ಜನರಿಗೆ ಓದಿನಲ್ಲಿ ಆಸಕ್ತಿಯಿರುತ್ತಿತ್ತು. ಕೈಗಳಲ್ಲಿ ಪುಸ್ತಕಗಳಿರುತ್ತಿದ್ದವು. ಆದರೆ ಆಧುನಿಕರಣಕ್ಕೊಳಗಾಗಿ ಪೆನ್ನು-ಪುಸ್ತಕಗಳನ್ನು ಹಿಡಿಯಬೇಕಾದ ಕೈಗಳು ಇಂದು ಮೊಬೈಲ್, ಕಂಪ್ಯೂಟರ್ ಬಳಕೆಯಲ್ಲೇ ಮಗ್ನವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

*
ಕನ್ನಡ ಭಾಷೆಯ ಜತೆಗೆ ಸಾಹಿತ್ಯ, ಜನಪದ ಕಲೆ ಮತ್ತು ಜನಪದ ಹಾಡುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮ ಮೇಲಿದೆ.
–ಎನ್‌.ನಾಗಪ್ಪ, ಹರಿಹರ ಶ್ರೀ ಪುರಸ್ಕೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.