ADVERTISEMENT

ಕಸದ ತೊಟ್ಟಿಯಂತಾದ ಬಾಳನಕಟ್ಟೆ ಬಸ್ ನಿಲ್ದಾಣ

ಪ್ರಸನ್ನಕುಮಾರ ಹಿರೇಮಠ
Published 7 ಡಿಸೆಂಬರ್ 2015, 5:23 IST
Last Updated 7 ಡಿಸೆಂಬರ್ 2015, 5:23 IST

ತುಮಕೂರು: ನಗರಸಭೆಯಿಂದ ಪಾಲಿಕೆಯಾಗಿ ಮುಂಬಡ್ತಿ ಪಡೆದ ತುಮಕೂರಿಗೆ ಈಗ ಸ್ಮಾರ್ಟ್ ಸಿಟಿಯ ಹಿರಿಮೆ ದಕ್ಕಿದೆ. ಆದರೆ ದೀಪದ ಬುಡದಲ್ಲೆ ಕತ್ತಲು ಎನ್ನುವ ಹಾಗೆ ಪಾಲಿಕೆಗೆ ಸೇರಿದ ಹಳೆಯ ಬಸ್‌ ನಿಲ್ದಾಣದ ಜಾಗ ಕಸದ ತೊಟ್ಟಿಯಾಗಿದೆ.

ಸ್ಮಾರ್ಟ್ ಸಿಟಿಗೆ ಬೇಕಾದ ಸಲಹೆ, ಸೂಚನೆ ಪಡೆಯಲು ದಿನಕ್ಕೊಂದು ಕಾರ್ಯಾಗಾರ, ಸಂವಾದ ನಡೆದರೂ ಪಾಲಿಕೆ ಅಧಿಕಾರಿಗಳು ಹಳೆಯ ಖಾಸಗಿ ಬಸ್ ನಿಲ್ದಾಣ ಜಾಗದ ಕುರಿತು ಈವರೆಗೂ ಪರಿಣಾಮಕಾರಿ ಚರ್ಚೆ ನಡೆಸಿಲ್ಲ. ಬಸ್‌ ನಿಲ್ದಾಣದ ಜಿಜ್ಞಾಸೆಯ ಕುರುಹಾಗಿರುವ ಈ ಜಾಗವೀಗ ಗುಜರಿ ಅಂಗಡಿ, ಗ್ಯಾರೇಜ್‌ ಹಾಗೂ ಕಸ ಎಸೆಯುವ ತೊಟ್ಟಿಯಂತಾಗಿದೆ.

ಬಾಳನಕಟ್ಟೆ ಸಮೀಪವೇ ಗುಬ್ಬಿ ವೀರಣ್ಣ ರಂಗಮಂದಿರ, ವಾರ್ತಾ ಭವನ, ಪ್ರಶಾಂತ ಚಿತ್ರ ಮಂದಿರವಿದೆ. ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಹಳೆಯ ಬಸ್‌ ನಿಲ್ದಾಣದ ಜಾಗಕ್ಕೆ ಬರುತ್ತಿದ್ದಂತೆ ದುರ್ನಾತ ಮೂಗಿಗೆ ಬಡಿಯುತ್ತದೆ.

ಖಾಸಗಿ ಬಸ್ ನಿಲ್ದಾಣ ಸ್ಥಳಾಂತರವಾದ ಬಳಿಕ ಈ ಜಾಗವನ್ನು ಕೇಳುವವರೇ ಇಲ್ಲದಂತಾಗಿದೆ.  ಮಳೆ ಬಂದರಂತೂ ಇಲ್ಲಿ ಸಂಚರಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಕಸದೊಂದಿಗೆ ಹರಿಯುವ ಕೊಳಚೆ ನೀರು, ವಾರಕ್ಕೊಮ್ಮೆ ಬಾಯಿ ತೆರೆಯುವ ಮ್ಯಾನ್‌ಹೋಲ್‌ ಗಲೀಜು ನೀರಿನಲ್ಲೇ ಜನರು ನಡೆದಾಡಬೇಕಾದ ಪರಿಸ್ಥಿತಿ ಇದೆ.

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ವೀರಸೌಧದಲ್ಲಿ ಧ್ವಜಾರೋಹಣಕ್ಕೆ ಆಗಮಿಸಿದ್ದ ಶಾಸಕ ರಫೀಕ್ ಅಹಮದ್ ಅವರು ಇಲ್ಲಿನ ಅವ್ಯವಸ್ಥೆ ಕಂಡು ನಗರಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ನಂತರ ಕಸ ತೆಗೆಸಿ, ಸ್ವಚ್ಛ ಮಾಡಿಸಲಾಗಿತ್ತು. ಈಗ ಮತ್ತದೇ ಗಲೀಜು, ಬೀಡಾಡಿ ಹಸುಗಳು, ನಾಯಿಗಳು, ಹಂದಿಗಳ ಆವಾಸಸ್ಥಾನ ಹಾಗೂ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಸರ್ಕಾರಿ ಬಸ್ ನಿಲ್ದಾಣ ಸಮೀಪದಲ್ಲಿರುವ ಈ ಜಾಗದಲ್ಲಿ ನಗರ ಪಾಲಿಕೆ ವತಿಯಿಂದ ಅಂಗಡಿ ಸಮುಚ್ಚಯ, ವಸತಿ ಸಮುಚ್ಚಯ ಅಥವಾ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಿಸಬೇಕು ಎಂಬ ಬೇಡಿಕೆ ಆಗಾಗ ಕೇಳಿಬರುತ್ತಿದೆ. ಆದರೂ ಈವರೆಗೆ ಯಾವುದೇ ಬೇಡಿಕೆ ಈಡೇರಿಲ್ಲ. ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಪ್ರಬಲ ಒತ್ತಾಯ ಕೇಳಿಬಂದಿದೆಯಾದರೂ ಜಾಗ ಖರೀದಿ ವಿಷಯದಲ್ಲಿ ಸಾರಿಗೆ ನಿಗಮ ಹಾಗೂ ಪಾಲಿಕೆ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ.

ಬಸ್‌ ನಿಲ್ದಾಣಕ್ಕೆ ಕಡಿಮೆ ದರದಲ್ಲಿ ಭೂಮಿ ನೀಡಿದರೆ ನಿಲ್ದಾಣ ಸ್ಥಾಪನೆಗೆ ನಾವು ಸಿದ್ದರಿದ್ದೇವೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇದನ್ನೊಪ್ಪದ ಪಾಲಿಕೆ ಅಧಿಕಾರಿಗಳು, ನಮಗೆ ಮಾರುಕಟ್ಟೆ ದರವನ್ನೇ ನೀಡಬೇಕು. ಇಲ್ಲವಾದಲ್ಲಿ ಭೂಮಿ ನೀಡುವುದಿಲ್ಲ ಎಂದು ಮೊಂಡಾಟ ಪ್ರದರ್ಶಿಸುತ್ತಿರುವುದರಿಂದ ಹಳೆಯ ಬಸ್‌ ನಿಲ್ದಾಣ ಜಾಗ ಸೊರಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.