ತುಮಕೂರು: ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ತಡೆಯಲಾಗದೆ ಜನತೆ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳ ಹಾರಿಕೆಯ ಉತ್ತರದಿಂದಾಗಿ ದಿಕ್ಕು ತೋಚದಂತಾಗಿದೆ.
ಕುಚ್ಚಂಗಿಗೇಟ್, ರಾಮಗೊಂಡನಹಳ್ಳಿ, ಸೀಗೇಪಾಳ್ಯ, ಮಲ್ಲೇನಹಳ್ಳಿ ಗ್ರಾಮಗಳಲ್ಲಿ ಚಿರತೆಗಳು ಪ್ರತಿ ದಿನ ಸಂಜೆ ವೇಳೆ ಕಾಣಿಸಿಕೊಳ್ಳುತ್ತಿವೆ. ಗ್ರಾಮಗಳ ಸಾಕಷ್ಟು ಮೇಕೆ, ಕುರಿಗಳನ್ನು ಹೊತ್ತೊಯ್ಯತ್ತವೆ. ಮೊದಲೇ ಬರಗಾಲದಿಂದ ತತ್ತರಿಸುತ್ತಿ ರುವ ಜನತೆ ಕುರಿ, ಮೇಕೆ ಕಳೆದುಕೊಂಡು ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ.
ಚಿರತೆ ಕಾಟದಿಂದ ಪ್ರತಿ ದಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬಂದು ಗಲಾಟೆ ಮಾಡ ತೊಡಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯದುನಂದಕುಮಾರ್ ಗುರುವಾರ `ಪ್ರಜಾವಾಣಿ~ ಯೊಂದಿಗೆ ನೋವು ತೋಡಿಕೊಂಡರು.
ತೋವಿನಕೆರೆ- ಜೋನಿಹಳ್ಳಿ ರಸ್ತೆ, ಹಿರೇಗುಂಡಗಲ್ ಗೇಟ್ ಬಳಿ ಜನ ತಿರುಗಾಡುವುದನ್ನೇ ಬಿಟ್ಟಿದ್ದಾರೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತೋಟಗಳಲ್ಲಿ ಮನೆಗಳಿರುವು ದರಿಂದ ಜನತೆ ಸಂಜೆ ನಂತರ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್ ಇದ್ದರೂ ಚಿರತೆ ಭಯದಿಂದ ತೋಟಕ್ಕೆ ನೀರು ಹಾಯಿಸುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ ಈ ಭಾಗದ ತೋಟಗಳೆಲ್ಲ ಒಣಗುತ್ತಿವೆ ಎಂದು ಹೇಳಿದರು.
ಉಪ ಅರಣ್ಯಾಧಿಕಾರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರೆ ಚಿರತೆಯ ವಿಷಯವೇ ಗೊತ್ತಿಲ್ಲ ಎನ್ನುತ್ತಾರೆ. ವಲಯ ಅರಣ್ಯಾಧಿಕಾರಿ ಚಿರತೆ ಹಿಡಿಯಲು ಪಂಜರ ಇಲ್ಲ ಎನ್ನುತ್ತಾರೆ. ಜಿಲ್ಲಾಧಿಕಾರಿ ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಬರಗಾಲದಿಂದ ತತ್ತರಿಸಿರುವ ಜನತೆ ಸಂಕಷ್ಟವನ್ನು ಅಧಿಕಾರಿಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರಯ್ಯ ಹೇಳಿದರು.
ಮೂರು ತಿಂಗಳ ಹಿಂದೆ ಕುಚ್ಚಂಗಿಗೇಟ್ ಬಳಿ ತೋಟವೊಂದರಲ್ಲಿ ಉರುಳಿಗೆ ಬಿದ್ದು ಎರಡು ಚಿರತೆ ಮರಿಗಳು ಸಾವಿಗೀಡಾಗಿದ್ದವು. ಘಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಚಿರತೆ ಹಿಡಿದು ಬೇರೆಡೆ ಸಾಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಗ್ರಾಮದ ಕಡೆ ಮುಖವನ್ನೇ ಹಾಕಿಲ್ಲ ಎಂದು ಗ್ರಾಮದ ಸಿದ್ದಲಿಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.