ADVERTISEMENT

ಕುಣಿಗಲ್ ತಾಲ್ಲೂಕು ಕಚೇರಿಗೆ ಉಸ್ತುವಾರಿ ಸಚಿವರ ದಿಢೀರ್ ಭೇಟಿ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 10:20 IST
Last Updated 15 ಫೆಬ್ರುವರಿ 2011, 10:20 IST

ಕುಣಿಗಲ್: ಪಟ್ಟಣದ ತಾಲ್ಲೂಕು ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದಾಗ ತಹಶೀಲ್ದಾರ್ ಸಹಿತ ಯಾವೊಬ್ಬ ಅಧಿಕಾರಿಯೂ ಕಚೇರಿಯಲ್ಲಿ ಇಲ್ಲದ್ದನ್ನು ಕಂಡು ಸಿಡಿಮಿಡಿಗೊಂಡರು.ಹಾಸನಕ್ಕೆ ತೆರಳುವ ಮಾರ್ಗ ಮಧ್ಯೆ ಚಹಾ ಸೇವಿಸುವ ಸಲುವಾಗಿ ತಾಲ್ಲೂಕು ಕಚೇರಿ ಬಳಿ ವಾಹನ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ ತಾಲ್ಲೂಕು ಕಚೇರಿಗೆ ಆಗಮಿಸಿ ಕೆಲಸಗಳಾಗದೆ ಬೇಸತ್ತ ಸಾರ್ವಜನಿಕರು ಸಚಿವರಿಗೆ ಮನವಿ ಮಾಡಿದ ಮೇರೆಗೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದರು.

ತಾಲ್ಲೂಕು ಕಚೇರಿಯಲ್ಲಿ ಖಾತೆ-ಪಹಣಿ, ವೃದ್ಧಾಪ್ಯವೇತನ, ಅಂಗವಿಕಲ ವೇತನ, ವಿಧವಾ ವೇತನ, ಪಡೆಯಲು ಸಾಕಷ್ಟು ತೊಂದರೆಗಳಾಗುತ್ತಿವೆ. ಹಣ ಕೊಡದ ಹೊರತು ಯಾವ ಕೆಲಸಗಳೂ ಅಗುತ್ತಿಲ್ಲ. ಅಡುಗೆ ಅನಿಲ ವಿತರಣೆಯಲ್ಲೂ ಹೆಚ್ಚು ಲೋಪದೋಷಗಳಿದ್ದು ಸಕಾಲದಲ್ಲಿ ವಿತರಣೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದರು.

ಸಾರ್ವಜನಿಕರ ದೂರಿನಿಂದ ಅಸಮಾಧಾನಗೊಂಡ ಸಾರ್ವಜನಿಕರು, ದೂರವಾಣಿ ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸಂಪರ್ಕಿಸಿ ತಾಲ್ಲೂಕು ಕಚೇರಿಯ ಹದಗೆಟ್ಟ ವ್ಯವಸ್ಥೆಯನ್ನು ತಾಲ್ಲೂಕು ಕೇಂದ್ರದಲ್ಲಿಯೆ ಖುದ್ದು ಬಗೆಹರಿಸಬೇಕೆಂದು ಆದೇಶಿಸಿದರು.ಸಚಿವರ ಭೇಟಿಯ ಸುದ್ದಿ ತಿಳಿದು ಪ್ರಭಾರ ತಹಶೀಲ್ದಾರ್ ಶಾಂತಾ ಎಲ್.ಹುಲಮನಿ, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಕಚೇರಿಗೆ ಆಗಮಿಸಿದರು. ತೀವ್ರ ಅಸಮಧಾನಗೊಂಡ ಸಚಿವರು, ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಆಶ್ರಯ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದ್ದರೂ ಇದುವರೆವಿಗೂ ನೀಡಿಲ್ಲ. ಇನ್ನು ಮೂರು ದಿನದೊಳಗೆ ಪಟ್ಟಿಯನ್ನು ನೀಡುವಂತೆ ತಾಕೀತು ಮಾಡಿದರು. ಪ್ರತಿದಿನ ಮಧ್ಯಾಹ್ನ ಮೂರು ಗಂಟೆ ನಂತರ ಕಚೇರಿಯಲ್ಲೇ ಉಳಿದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು ತಹಶೀಲ್ದಾರ್‌ಗೆ ಸೂಚಿಸಿದರು.ತುಮಕೂರು, ಹಾಸನ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕಾರಣ ಕಾರ್ಯಭಾರದ ಒತ್ತಡದಿಂದಾಗಿ ತುಮಕೂರು ಜಿಲ್ಲೆಗೆ ಹೆಚ್ಚು ಒತ್ತು ನೀಡಲು ಆಗುತ್ತಿಲ್ಲ. ಈ ಜಿಲ್ಲೆಯಲ್ಲಿ ಸಮಸ್ಯೆಗಳು ಕಡಿಮೆ. ಕಿತಾಪತಿಯೂ ಕಡಿಮೆ. ಆದರೆ, ಅತಿ ಹೆಚ್ಚು ಕಿತಾಪತಿಯಿರುವ ಹಾಸನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಆಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.