ADVERTISEMENT

ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ

ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 6:04 IST
Last Updated 12 ಜೂನ್ 2018, 6:04 IST

ತುಮಕೂರು: ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

2018–19ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಈಗಿನ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್ ನೀಡುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಸರ್ಕಾರದ ಈ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

22 ಲಕ್ಷ ವಿದ್ಯಾರ್ಥಿಗಳು: ಈ ವರ್ಷ ರಾಜ್ಯದಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್‌ಗೆ ಅರ್ಜಿ ಸಲ್ಲಿಸುವವರಿದ್ದಾರೆ. ಆದರೆ, ಹಿಂದಿನ ರಾಜ್ಯ ಸರ್ಕಾರ ಅಂದಿನ ಅಂಕಿ ಅಂಶಗಳ ಪ್ರಕಾರ 19.60 ಲಕ್ಷ ವಿದ್ಯಾರ್ಥಿಗಳಿಗೆ ₹ 836.96 ಕೋಟಿ ಅನುದಾನ ನಿಗದಿಪಡಿಸಿತ್ತು. ಈಗಿನ ಅಂಕಿ ಅಂಶಗಳ ಪ್ರಕಾರ ಹೆಚ್ಚುವರಿಯಾಗಿ ₹ 629.32 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ ಎಂದು ವಿವರಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಣಕಾಸು ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದು, ಇಲಾಖೆ ಈ ಹೆಚ್ಚುವರಿ ಮೊತ್ತ ಪಾವತಿಗೆ ನಿರಾಕರಿಸಿದೆ ಎಂದು ದೂರಿದರು.

ಕೂಡಲೇ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಸಮಸ್ಯೆ ಅರ್ಥ ಮಾಡಿಕೊಂಡು ಎಲ್ಲ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡಬೇಕು ಎಂದು ಮನವಿ ಮಾಡಿದರು.

ಮನವಿ ಪತ್ರವನ್ನು ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗೀಯ ಅಧಿಕಾರಿ ಗಜೇಂದ್ರ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಎಬಿವಿ‍ಪಿ ನಗರ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ರಮೇಶ್, ಸಿದ್ದೇಶ್, ರಾಧಾಕೃಷ್ಣ, ಪ್ರಶಾಂತ್, ವಿನಯ್, ಚೇತನ್ ಹಾಗೂ ವಿದ್ಯಾರ್ಥಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.